ಮೈಸೂರು,ಏ.18(ಎಂಟಿವೈ)- ಲಾಕ್‍ಡೌನ್‍ನಿಂದ ಸಂತ್ರಸ್ತರಾಗಿರುವ ಮೈಸೂರಿನ ಬಿಎಂಶ್ರೀ ನಗರದ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬಿಜೆಪಿ ಮುಖಂಡ, ಚಿತ್ರನಟ ಎಸ್.ಜಯಪ್ರಕಾಶ್(ಜೆಪಿ) ತಮ್ಮ ಬೆಂಬಲಿಗರೊಂದಿಗೆ ದಿನಸಿ ಕಿಟ್ ವಿತರಿಸಿದರು.
ಬಿಎಂಶ್ರೀ ನಗರದ ಬಡಕುಟುಂಬದವರ ಮನೆ ಬಾಗಿಲಿಗೆ ತೆರಳಿ 5 ಕೆಜಿ ಅಕ್ಕಿ, ಒಂದು ಕೆಜಿ ಗೋಧಿ ಹಿಟ್ಟು, ಉಪ್ಪು, ಬೇಳೆಕಾಳು, ಅರ್ಧ ಲೀಟರ್ ಅಡುಗೆ ಎಣ್ಣೆ ಮೊದಲಾದ ದಿನಸಿ ಪದಾರ್ಥಗಳಿದ್ದ ಕಿಟ್ ವಿತರಿಸಲಾಯಿತು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಎಸ್.ಜಯಪ್ರಕಾಶ್, ಕೊರೊನಾ ವೈರಾಣು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಮಾಡಲಾಗಿದ್ದು, ನೂರಾರು ಬಡ ಕುಟುಂಬಗಳು, ದುಡಿಮೆ, ಆಹಾರವಿಲ್ಲದೇ ತತ್ತರಿಸಿವೆ. ಈ ಹಿನ್ನೆಲೆಯಲ್ಲಿ ವಿವಿಧ ಬಡಾವಣೆಗಳಲ್ಲಿ ನೆಲೆಸಿರುವ, ದಿನದ ಕೂಲಿಯನ್ನೇ ಅವಲಂಬಿಸಿದ್ದ ಕುಟುಂಬಗಳಿಗೆ ದಿನಸಿ ಕಿಟ್ ನೀಡಲಾಗುತ್ತಿದೆ. ಇಂದು ಬಿಎಂಶ್ರೀ ನಗರದಲ್ಲಿ 50 ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿರುವುದರಿಂದ ಪಟ್ಟಿ ಮಾಡಿದ ಸಂತ್ರಸ್ತರ ಕುಟುಂಬಗಳ ಮನೆ ಬಾಗಿಲಿಗೇ ಹೋಗಿ ದಿನಸಿ ಕಿಟ್ ನೀಡುತ್ತಿರುವುದಾಗಿ ತಿಳಿಸಿದರು.
ಮುಗಿಬಿದ್ದರು: ದಿನಸಿ ಕಿಟ್ ಪಡೆಯಲು ಏಕಾಏಕಿ ಹಲವರು ಮುಗಿಬಿದ್ದರು. ಗಸ್ತು ತಿರುಗುತ್ತಿದ್ದ ಮೇಟಗಳ್ಳಿ ಪೊಲೀಸರು ಗುಂಪು ಚದುರಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಚೇತನ ರಮೇಶ್, ಬಿಜೆಪಿ ಮುಖಂಡ ಹನುಮಂತೇಗೌಡ, ರಘುಗೌಡ, ಬೀರಯ್ಯ, ಅರುಣ್, ಚಂದ್ರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.