ಕೇರಳ ಪ್ರವಾಹ: ಸ್ವಲ್ಪ ಮಟ್ಟಿಗೆ ತಗ್ಗಿದ ಮಳೆ, ರಕ್ಷಣಾ ಕಾರ್ಯಾಚರಣೆ ಬಿರುಸು

ಕೇರಳ: ಶತಮಾನದಲ್ಲಿಯೇ ಅತ್ಯಂತ ಭೀಕರ ಪ್ರವಾಹದ ಹೊಡೆತಕ್ಕೆ ತುತ್ತಾಗಿರುವ ನೆರೆಯ ಕೇರಳದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 8 ಜಿಲ್ಲೆಗಳಲ್ಲಿ 58 ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಡಿಜಿ ತಿಳಿಸಿದ್ದಾರೆ.

ಈ ತಂಡಗಳು ರಸ್ತೆ ತೆರವು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚು ಹಾನಿಗೊಂಡಿರುವ ಪ್ರದೇಶಗಳಿಗೆ ಎನ್‍ಡಿಆರ್‍ಎಫ್ ತುಕಡಿಗಳನ್ನು ಸ್ಥಳಾಂತರಿ ಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಇಂದು ಬೆಳಿಗ್ಗೆ ಪಾಲ್ಕಾಡ್ ಜಿಲ್ಲೆಯಲ್ಲಿ ಸಹ ಮೃತದೇಹವೊಂದನ್ನು ಪತ್ತೆ ಹಚ್ಚಲಾಗಿದೆ. ಈ ಪ್ರದೇಶದಲ್ಲಿ ಈವರೆಗೂ 10 ಮೃತದೇಹಗಳು ಸಿಕ್ಕಿವೆ. ಭೂ ಕುಸಿತಗಳು ಇಂದು ಸಹ ಉಂಟಾ ಗುತ್ತಿದ್ದು, ಮೃತದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ಕಷ್ಟಸಾಧ್ಯವಾಗಿದೆ ಎಂದು ಆರ್‍ಎಫ್ ಕೊಯಂಬತ್ತೂರು ಘಟಕದ ಉಪ ಕಮಾಂಡೆಂಟ್ ಹೇಳಿದ್ದಾರೆ.

ತ್ರಿಸೂರ್ ಬಳಿಯ ಅಲಾಪ್ಪಾಡ್ ಗ್ರಾಮದಲ್ಲಿ ಗರ್ಭಿಣಿಯೊಬ್ಬರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಭೂಕುಸಿತದಿಂದ ಹಾನಿಯಾಗಿದ್ದ ನೆಲ್ಯಮ್ ಪಥ್ಯ ಗುಡ್ಡ ಪ್ರದೇಶದಲ್ಲಿನ ರಸ್ತೆ ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಮಧ್ಯೆ ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸಲು ದೇಶೀಯ ವಿಮಾನ ಯಾನ ಸಂಸ್ಥೆಯು ತಿರುವನಂತಪುರ, ಕ್ಯಾಲಿಕಟ್ ಮತ್ತು ಕೊಯಮತ್ತೂರು ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ವಿಮಾನಗಳನ್ನು ಅಳವಡಿಸಿವೆ. 9 ವಿದೇಶಿ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ಸೇವೆಯ ಅವಧಿಯನ್ನು ಮರು ಹೊಂದಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತರ ನೆರವಿಗಾಗಿ ದೇಶಾದ್ಯಂತ ನೆರವಿನ ಭರಪೂರವೇ ಹರಿದುಬರುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 10 ಕೋಟಿ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಆಂಧ್ರಪ್ರದೇಶದ ಐಎಎಸ್ ಅಧಿಕಾರಿಗಳ ಸಂಘದಿಂದ ಒಂದು ದಿನದ ಸಂಬಳವನ್ನು ಪರಿಹಾರವಾಗಿ ನೀಡುವುದಾಗಿ ತಿಳಿಸಿದೆ. ಅನ್ ಬೊಡು ಕೊಚಿ ಸ್ವಯಂ ಸೇವಾ ಸಂಸ್ಥೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಸಂಗ್ರಹಣ ಕೇಂದ್ರ ವನ್ನು ತೆರೆದಿದೆ. ಭಾರತೀಯ ನೌಕಾದಳದ ಹಡಗಿನ ಮೂಲಕ ಸಂತ್ರಸ್ತರಿಗೆ ಕುಡಿಯುವ ನೀರು ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ.