ಉದ್ಯಮಿಗಳ ಸಾಲ ಮನ್ನಾ ಮಾಡಿದ ಬಿಜೆಪಿ: ಕೆಪಿಸಿಸಿ ಆರೋಪ

ಮೈಸೂರು, ಮೇ 3-ನರೇಂದ್ರ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ದೊಡ್ಡ ಉದ್ಯಮಿಗಳ ಸಾಲ ಮಾತ್ರ ಯಾರಿಗೂ ತಿಳಿಯದೇ ಮನ್ನಾ ಮಾಡುತ್ತಿರುವುದು ಈ ದೇಶದ ದೌರ್ಭಾಗ್ಯ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ ಕಿಡಿಕಾರಿದ್ದಾರೆ. ಮೋದಿ ಸರ್ಕಾರ ಒಟ್ಟಾರೆ 5.5 ಲಕ್ಷ ಕೋಟಿ ರೂ. ಸಾಲವನ್ನು ಕಳೆದ ಆರು ವರ್ಷಗಳಲ್ಲಿ ರೈಟ್ ಆಫ್ ಮಾಡಿದೆ. ಈ ಸಾಲವನ್ನು ಬ್ಯಾಲೆನ್ಸ್ ಶೀಟ್‍ನಿಂದ ತೆಗೆದು ಹಾಕ ಲಾಗಿದೆ ಅಷ್ಟೆ ಎಂದು ಬಿಜೆಪಿಯವರು ಹೇಳುತ್ತಿರುವುದು ಜನರ ಕಿವಿಗೆ ಹೂ ಮುಡಿಸಿದಂತಿದೆ. ಬ್ಯಾಂಕ್‍ಗಳಿಗೆ ಮತ್ತು ದೇಶಕ್ಕೆ ಮೋಸ ಮಾಡಿ ಹೊರ ದೇಶಗಳಿಗೆ ಪರಾರಿಯಾಗಿರುವ ನೀರವ್ ಮೋದಿ, ಮೆಹುಲ್ ಚೋಸ್ಕಿ, ವಿಜಯ ಮಲ್ಯ ಸೇರಿದಂತೆ ಒಟ್ಟು 20 ಉದ್ಯಮಿಗಳ ಸಾಲ ಸೇರಿ 2019ರಲ್ಲಿ 68,607 ಕೋಟಿ ರೂ. ಸಾಲವನ್ನು ಮತ್ತೆ ಮನ್ನಾ ಮಾಡಿದ್ದಾರೆ. ಈ 20 ಜನರ ಪೈಕಿ ಬಹುತೇಕರು ಗುಜರಾತ್‍ನವರಾಗಿದ್ದು ವಜ್ರದ ವ್ಯಾಪಾರಸ್ಥರಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮೇ3 ನಂತರ ಲಾಕ್‍ಡೌನ್ ಬೇಡ: ಪ್ರಧಾನಿ ನರೇಂದ್ರ ಮೋದಿಯವರು ಲಾಕ್‍ಡೌನ್ ಮೂಲಕ ಕೊರೋನಾವನ್ನು ಓಡಿಸಬಹುದೆಂದು ಭಾವಿಸಿದ್ದಾರೆ. ಲಾಕ್‍ಡೌನ್‍ನ್ನು ಮುಂದು ವರಿಸುವುದರಿಂದ ಲಕ್ಷಾಂತರ ಜನರು ಹಸಿವಿನಿಂದ ಸಾಯುತ್ತಾರೆ ಎಂಬ ಪರಿಜ್ಞಾನ ಸರ್ಕಾರಕ್ಕೆ ಇರಬೇಕು. ಮೇ3ರ ನಂತರ ಲಾಕ್‍ಡೌನ್ ಸಡಿಲಿಸಿ, ಜನರು ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.