ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ವಿರೋಧಿಸಿ ಕೆಎಸ್‍ಐಸಿ ನೌಕರರ ಪ್ರತಿಭಟನೆ

ಮೈಸೂರು: ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ಅವೈಜ್ಞಾನಿಕವಾಗಿದ್ದು, ರೇಷ್ಮೆ ಸಚಿವ ಸಾ.ರಾ.ಮಹೇಶ್ ಇಂತಹ ಪ್ರಸ್ತಾಪದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ (ಕೆಎಸ್‍ಐಸಿ) ಮೈಸೂರು ಸಿಲ್ಕ್ ಫ್ಯಾಕ್ಟರಿ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಮೈಸೂರು ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಇಂದು ಮಧ್ಯಾಹ್ನ ಊಟದ ವಿರಾಮದ ಅವಧಿಯಲ್ಲಿ ಪ್ರತಿಭಟನೆ ನಡೆಸಿದ ನೌಕರರು, ರಿಯಾಯಿತಿ ದರದಲ್ಲಿ 10,500 ಸಾವಿರ ರೇಷ್ಮೆ ಸೀರೆಯನ್ನು ಕೇವಲ 4,500 ರೂ.ಗಳಿಗೆ ಮಾರಾಟ ಮಾಡುವುದು ಅವೈಜ್ಞಾನಿಕ. ಇದು ಕಾರ್ಖಾನೆಗೆ ಕಂಟಕಪ್ರಾಯವಾಗುವ ಮೂಲಕ ಅಂತಿಮವಾಗಿ ನೌಕರರು ಬೀದಿ ಪಾಲಾಗುವ ಅಪಾಯವಿದೆ. ಹೀಗಾಗಿ ಸಚಿವರು ಈ ಪ್ರಸ್ತಾಪ ಕೈಬಿಡಬೇಕು ಎಂದು ಆಗ್ರಹಿಸಿದರು.

ಒಂದು ಸೀರೆಯ ಉತ್ಪಾದನಾ ವೆಚ್ಚಕ್ಕೆ ತಗಲುವ ಒಟ್ಟು ಮೊತ್ತದ ಅರ್ಧದಷ್ಟು ಬೆಲೆಯಲ್ಲಿ ಸೀರೆ ಮಾರಾಟ ಮಾಡುವುದು ಕಾರ್ಖಾನೆಯನ್ನು ಭಾರೀ ನಷ್ಟಕ್ಕೆ ತಳ್ಳಿದಂತೆ ಆಗಲಿದೆ. ಸದ್ಯ ಸಚಿವರು ಮೌಖಿಕವಾಗಿ ಈ ಯೋಜನೆಯನ್ನು ಪ್ರಕಟಿಸಿದ್ದು, ಸರ್ಕಾರ ಆದೇಶವಾಗಿಲ್ಲ. ಈಗಲಾದರೂ ಸಚಿವರು ವಾಸ್ತವ ಸ್ಥಿತಿ ಅರ್ಥ ಮಾಡಿಕೊಂಡು ಈ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ರಿಯಾಯಿತಿ ದರದಲ್ಲಿ ಸೀರೆ ಮಾರಲೇಬೇಕೆಂದರೆ ರಾಜ್ಯ ಸರ್ಕಾರ ಆ ಮೊತ್ತವನ್ನು ಕಾರ್ಖಾನೆಗೆ ಭರಿಸಬೇಕು. ಇಲ್ಲವಾದರೆ ರಿಯಾಯಿತಿ ದರದ ಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. 400ಕ್ಕೂ ಹೆಚ್ಚು ಮಂದಿ ನೌಕರರು ದಿಢೀರ್ ಪ್ರತಿಭಟನೆ ನಡೆಸಿದರು.

ಕಾರ್ಖಾನೆಯ ಎಐಟಿಯುಸಿ, ಸಿಐಟಿಯು, ಎಸ್‍ಸಿ-ಎಸ್‍ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ 400ಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.