ಬಿಜೆಪಿಯಿಂದ ನನಗೆ ಸಚಿವ ಸ್ಥಾನ, 30 ಕೋಟಿ ರೂ. ಆಮಿಷ ಒಡ್ಡಲಾಗಿತ್ತು

ಬೆಳಗಾವಿ: ಬಿಜೆಪಿ ಮುಖಂಡ ರೊಬ್ಬರು ನನಗೆ ಕರೆ ಮಾಡಿ, ತಮ್ಮ ಪಕ್ಷ ಸೇರಿದಂತೆ ಸಚಿವ ಸ್ಥಾನ ಹಾಗೂ 30 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಶುಕ್ರವಾರ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಲಕ್ಷ್ಮಿ ಹೆಬ್ಬಾಳಕರ್ ಅವರು, ನಾನು ಕಳೆದ ಮೇ 16 ಮತ್ತು 17 ರಂದು ಹೈದರಾಬಾದ್ ನಲ್ಲಿದ್ದಾಗ ನನಗೆ ಬಿಜೆಪಿ ಮುಖಂಡರೊಬ್ಬರಿಂದ ಕರೆ ಬಂದಿತ್ತು. ಕಾಂಗ್ರೆಸ್‍ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಎಂದು ಆಹ್ವಾನ ನೀಡಿದರು ಎಂದು ಆರೋಪಿಸಿದ್ದಾರೆ. ಆದರೆ ಆಫರ್ ನೀಡಿದ ಬಿಜೆಪಿ ನಾಯಕರ ಹೆಸರು ಹೇಳಲು ನಿರಾಕರಿಸಿದರು.

ನನ್ನ ಮತ್ತು ಬಿಜೆಪಿ ಮುಖಂಡರ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ನಾನು ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಕಳುಹಿಸಿ ಕೊಟ್ಟಿದ್ದೇನೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.

ಆಪರೇಷನ್ ಕಮಲ ನಿಸರ್ಗಕ್ಕೆ ವಿರುದ್ಧವಾದದ್ದು ಎಂದ ಅವರು, ಬಿಜೆಪಿಯಿಂದ ಈಗಾಗಲೇ ಹಲವು ಶಾಸಕರಿಗೆ ಆಫರ್ ನೀಡಲಾಗಿತ್ತು, ನನ್ನನ್ನು ಸಂಪರ್ಕಿಸಿದ್ದರು. ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ ಎಂದರು. ಕೇಂದ್ರ ಸಚಿವರೊಬ್ಬರು ನನ್ನ ಸಹೋದರಿಗೆ ಮೂರು ಬಾರಿ ಕರೆ ಮಾಡಿ, ನನ್ನನ್ನು ಬಿಜೆಪಿಗೆ ಕರೆತರುವಂತೆ ಕೇಳಿಕೊಂಡಿದ್ದರು ಎಂದು ಲಕ್ಷ್ಮಿ ಹೆಬ್ಬಾಳಕರ್ ದೂರಿದ್ದಾರೆ.