ಕುರಿಮಂಡಿ ವ್ಯಕ್ತಿ ಕೊಲೆ ಪ್ರಕರಣ; ಆರೋಪಿಗಳಿಬ್ಬರ ಸೆರೆ

ಎನ್‍ಆರ್ ಠಾಣೆ ಪೊಲೀಸರ ಕಾರ್ಯಾಚರಣೆ
ಮುಖ್ಯ ಆರೋಪಿಗಾಗಿ ಮುಂದುವರಿದ ಶೋಧ
ಮೈಸೂರು,ಡಿ.22(ಎಸ್‍ಪಿಎನ್)-ಹಣಕಾಸಿನ ವಿಚಾರವಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎನ್.ಆರ್.ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೈಸೂರಿನ ಕೆಸರೆ `ಎ’ ಬ್ಲಾಕ್‍ನ ಕುರಿಮಂಡಿ ನಿವಾಸಿ ನಿಖಿಲ್ ಅಲಿಯಾಸ್ ಮಾದ(20), ಎಂ.ಅಪ್ಪು(18) ಬಂಧಿತರು.

ಡಿ.14ರ ರಾತ್ರಿ ಕುರಿಮಂಡಿಯಲ್ಲಿರುವ ನರ್ಮ್ ಯೋಜನೆಯ ವಸತಿ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ರವಿ ಅಲಿಯಾಸ್ ಬಚ್ಚ(27) ಎಂಬಾತನ ಕೊಲೆಯಾಗಿತ್ತು. ನರಸಿಂಹರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿ ನಿಖಿಲ್, ಅಪ್ಪುವನ್ನು ಡಿ.18ರಂದು ವಶಕ್ಕೆ ಪಡೆದಿದ್ದರು. 4 ದಿನಗಳ ತೀವ್ರ ವಿಚಾರಣೆಯ ಬಳಿಕ ಆರೋಪಿಗಳನ್ನು ಇಂದು ಬಂಧನಕ್ಕೊಳಪಡಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿನಯ್ ಅಲಿಯಾಸ್ ಪರೋಟ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ವಿವರ: ಕುರಿಮಂಡಿ ನಿವಾಸಿ ವಿನಯ್ ಅಲಿಯಾಸ್ ಪರೋಟ ಹಾಗೂ ರವಿ ನಡುವೆ ಕೆಲ ದಿನಗಳಿಂದ ಹಣಕಾಸಿನ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಡಿ.13ರಂದು ರವಿ ಮದ್ಯ ಸೇವಿಸಿ ಬಂದು ವಿನಯ್ ಮನೆ ಮುಂದೆ ಗಲಾಟೆ ಮಾಡಿದ್ದ. ಇದರಿಂದ ವಿನಯ್‍ನ ವÀುನೆ ಮಾಲೀಕರು ಮನೆ ಖಾಲಿ ಮಾಡುವಂತೆ ವಿನಯ್‍ನನ್ನು ಒತ್ತಾಯಿಸಿದ್ದರು. ಇದರಿಂದ ರವಿ ಮೇಲೆ ಕೋಪಗೊಂಡ ವಿನಯ್, ನಿಖಿಲ್ ಮತ್ತು ಅಪ್ಪು ಜತೆಗೂಡಿ ರವಿಯ ಕೊಲೆಗೆ ಸಂಚು ರೂಪಿಸಿದ್ದ ಎಂಬುದು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ. ಡಿ.14ರ ರಾತ್ರಿ ಮದ್ಯ ಸೇವಿಸಿ ಪಾರ್ಟಿ ಮಾಡುವ ನೆಪದಲ್ಲಿ ರವಿ ಮನೆಯಲ್ಲಿ ಸೇರಿಕೊಂಡೆವು. ಅಲ್ಲಿ ರವಿಯ ಕುತ್ತಿಗೆಗೆ ಟವಲ್ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನರಸಿಂಹರಾಜ ವಿಭಾಗದ ಎಸಿಪಿ ಎಂ.ಶಿವಶಂಕರ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಅಜರುದ್ದೀನ್, ಸಿಬ್ಬಂದಿ ಮಂಜು ಹಾಗೂ ಮಂಜುನಾಥ್ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.