ಕೊರೊನಾ ನಿರ್ವಹಣೆಗೆ ಶಾಸಕರು, ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಟಾಸ್ಕ್‍ಫೋರ್ಸ್ ರಚನೆ

ಮೈಸೂರು, ಮೇ 5(ಆರ್‍ಕೆ)-ಕೊರೊನಾ ಮಹಾಮಾರಿ ಸಂಕಷ್ಟ ಪರಿಸ್ಥಿತಿ ನಿಭಾಯಿಸಲು ಶಾಸಕರ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರವಾರು ಹಾಗೂ ಕಾರ್ಪೊರೇಟರ್‍ಗಳ ನೇತೃತ್ವದಲ್ಲಿ ವಾರ್ಡ್ ವಾರು ಟಾಸ್ಕ್‍ಫೋರ್ಸ್ ಸಮಿತಿ ರಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣದಲ್ಲಿ ಬೆಳಗ್ಗೆ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಾಸಿಟಿವ್ ಇರುವವರನ್ನು ಗುರುತಿಸುವುದು, ರೋಗ ಲಕ್ಷಣಗಳಿಲ್ಲ ದಿರುವವರನ್ನು ಹೋಂ ಐಸೋಲೇಷನ್‍ನಲ್ಲಿರಿಸಿ ಮಾನಿಟರ್ ಮಾಡುವುದು, ರೋಗ ಲಕ್ಷಣಗಳಿರುವುದು, ರೋಗ ಲಕ್ಷಣಗಳಿದ್ದು, ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನೇಟೆಡ್ ಬೆಡ್ ಹಂಚಿಕೆ ಮಾಡುವುದು, ಸ್ಯಾಚುರೇಷನ್ ಲೆವೆಲ್ ಕುಸಿದು ಲಂಗ್ಸ್ ಇನ್ ಫೆಕ್ಷನ್ ಆಗಿರುವವರಿಗೆ ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡುವ ಮೂಲಕ ಪರಿಸ್ಥಿತಿ ನಿಭಾಯಿಸಲು ಶಾಸಕರು ಹಾಗೂ ಕಾರ್ಪೊರೇಟರ್‍ಗಳ ನೇತೃತ್ವದಲ್ಲಿ ಕೋವಿಡ್ ಟಾಸ್ಕ್‍ಫೋರ್ಸ್ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಹಾಗೂ ಪ್ರತೀ ಪಾಲಿಕೆ ವಾರ್ಡ್‍ನಲ್ಲಿ ಕಾರ್ಪೊರೇಟರ್‍ಗಳು ಸಮಿತಿ ಅಧ್ಯಕ್ಷರಾಗಿದ್ದು, ಅವರ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ಕಾರ್ಯನಿರ್ವ ಹಿಸಬೇಕೆಂದು ಸಚಿವರು ನಿರ್ದೇಶನ ನೀಡಿದರು.

ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಮತ್ತು ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ಹೆಚ್ಚುವರಿ ಲ್ಯಾಬೋರೇಟರಿಗಳನ್ನು ತೆರೆಯಬೇಕು, ಆರ್‍ಟಿ-ಪಿಸಿಆರ್ ಪರೀಕ್ಷೆ ಮಾಡಿದ ಬಳಿಕ ವರದಿ ಬರಲು 3-4 ದಿನಗಳಾಗುತ್ತಿರುವುದರಿಂದ ಅಷ್ಟರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದ ರಿಂದ ಹೆಚ್ಚುವರಿ ಲ್ಯಾಬ್‍ಗಳನ್ನು ತೆರೆದು ಬೇಗ ವರದಿ ನೀಡುವ ವ್ಯವಸ್ಥೆ ಮಾಡಬೇಕೆಂದೂ ಸೋಮಶೇಖರ್ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈ ಮೊದಲು 15ರಿಂದ 200 ಪಾಸಿಟಿವ್ ಪ್ರಕರಣ ಬರುತ್ತಿದ್ದವು. ಈಗ ದಿನಕ್ಕೆ 2,500 ರಿಂದ 3,000 ಪ್ರಕರಣಗಳು ದಾಖಲಾಗುತ್ತಿವೆ. ಪಾಸಿಟಿವ್ ಬಂದವರೆಲ್ಲರೂ ಆಕ್ಸಿಜನೇಟೆಡ್ ಬೆಡ್ ಬೇಕೆಂದು ಕೇಳುತ್ತಿದ್ದಾರೆ. ಅದನ್ನು ನಿಯಂತ್ರಿಸಬೇಕು. ರೆಮ್ಡಿ ಸಿವಿರ್ ಇಂಜೆಕ್ಷನ್ ಅಗತ್ಯ ಇರುವವರಿಗೆ ಪೂರೈಕೆ ಮಾಡಲು ಆನ್‍ಲೈನ್ ನೋಂದಣಿ ಮಾಡಲಾಗಿದ್ದು, ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಬೇಕೆಂದು ಅವರು ಜಿಲ್ಲಾಧಿ ಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.

ಜನರು ಬಯಸಿದಾಗ ಬಡಾವಣೆಗಳಿಗೆ ರಸಾಯನಿಕ ಸಿಂಪಡಿಸ ಬೇಕು, ಹೋಂ ಐಸೋಲೇಷನ್‍ನಲ್ಲಿರುವವರನ್ನು ಆಗಿಂದಾಗ್ಗೆ ವಿಚಾರಿಸಿ ಸಲಹೆ, ಮಾರ್ಗದರ್ಶನ ನೀಡುವ ಜೊತೆಗೆ ಪಾಸಿ ಟಿವ್ ಇರುವವರು ಹೊರಗಡೆ ಓಡಾಡದಂತೆ ನಿರ್ಬಂಧಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.

ಆಕ್ಸಿಜನ್ ವಿಚಾರದಲ್ಲಿ ಜನರು ಆತಂಕಕ್ಕೀಡಾಗಿದ್ದಾರೆ. ಆರೋಗ್ಯ ದಲ್ಲಿ ಸ್ವಲ್ಪ ವ್ಯತ್ಯಯವಾದರೂ ಆಕ್ಸಿಜನ್ ಬೇಕೆನ್ನುತ್ತಿದ್ದಾರೆ. ಆದರೆ ಯಾರಿಗೆ ಆಕ್ಸಿಜನೇಟೆಡ್ ಬೆಡ್ ಅಗತ್ಯವಿದೆ ಎಂಬುದನ್ನು ವೈದ್ಯರು ನಿರ್ಧರಿಸಿ ಶಿಫಾರಸು ಮಾಡಿ, ಕೋವಿಡ್ ವಾರ್ ರೂಂ ಮೂಲಕ ಹಂಚಿಕೆ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೇಯರ್ ರುಕ್ಮಿಣಿ ಮಾದೇಗೌಡ, ಕಾರ್ಪೊರೇಟರ್‍ಗಳಾದ ಪ್ರೇಮಾ ಶಂಕರೇಗೌಡ ಕೆ.ವಿ.ಶ್ರೀಧರ್, ಎಸ್‍ಬಿಎಂ ಮಂಜು, ನಮ್ರತಾ ರಮೇಶ್, ಲಕ್ಷ್ಮೀ ಶಿವಣ್ಣ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಆರೋಗ್ಯಾಧಿಕಾರಿ ಡಿ.ಜಿ. ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.