ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ಕಾನೂನು ಕ್ರಮ: ನಿವೇಶನ ಮಂಜೂರಾತಿದಾರರಿಗೆ ಮುಡಾ ಎಚ್ಚರಿಕೆ

ಮೈಸೂರು: ಖಾಲಿ ನಿವೇಶನಗಳಲ್ಲಿ ಬೆಳೆದಿ ರುವ ಗಿಡಗಂಟಿ ತೆಗೆದು ಸ್ವಚ್ಛಗೊಳಿಸದಿದ್ದಲ್ಲಿ, ದಂಡ ವಿಧಿಸಿ ಮಂಜೂರಾತಿದಾರರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಎಚ್ಚರಿಕೆ ನೀಡಿದ್ದಾರೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಎರಡು ಬಾರಿ ಮೈಸೂರಿಗೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿದೆ ಯಾದ್ದರಿಂದ ನಗರವನ್ನು ಸ್ವಚ್ಛವಾಗಿಡುವುದು ಎಲ್ಲರ ಕರ್ತವ್ಯವಾಗಿದೆ. ಸಿಐಟಿಬಿ ಮತ್ತು ಮುಡಾದಿಂದ ಮಂಜೂರು ಮಾಡಿರುವ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ತ್ಯಾಜ್ಯ ಸಂಗ್ರಹ ವಾಗಿರುವ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.
ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವುದಲ್ಲದೆ, ಹಲವು ರೋಗ-ರುಜಿನಗಳು ಉಂಟಾಗುವುದರಿಂದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಜವಾ ಬ್ದಾರಿ ಮಂಜೂರಾತಿದಾರರದ್ದಾಗಿದೆ. ಆದ್ದರಿಂದ ಮೂರು ದಿನದೊಳಗಾಗಿ ಸ್ವಚ್ಛಗೊಳಿಸದಿದ್ದಲ್ಲಿ ಶುಲ್ಕ ವಿಧಿಸಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದೂ ಕಾಂತರಾಜು ತಿಳಿಸಿದ್ದಾರೆ.

ಅದೇ ರೀತಿ ನಾಗರಿಕ ಸೌಲಭ್ಯ(ಸಿಎ) ನಿವೇಶನ ಮಂಜೂರಾತಿದಾರ ಸಂಘ-ಸಂಸ್ಥೆಯವರೂ ಸ್ವಚ್ಛಗೊಳಿಸಿ ನಿರ್ವಹಣೆ ಮಾಡದಿದ್ದರೆ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.