ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಅರಿವು 130 ಹಳ್ಳಿಗಳಲ್ಲಿ ಕಾನೂನು ಅರಿವು ಕಾರ್ಯ

ಮೈಸೂರು, ಅ.28(ಆರ್‍ಕೆಬಿ)- ಪ್ರತೀ ಹಳ್ಳಿಗಳಲ್ಲೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಂ ಡಿದ್ದು, ನಿನ್ನೆ 130 ಹಳ್ಳಿಗಳಲ್ಲಿ ಇಂತಹ ಕಾರ್ಯಕ್ರಮ ಮಾಡಿರುವುದಾಗಿ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ತಿಳಿಸಿದರು.

ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಎನ್.ಆರ್.ಮೊಹಲ್ಲಾದ ಡಾನ್ ಬಾಸ್ಕೋ ಮಕ್ಕಳಾಲಯದಲ್ಲಿ ಆಯೋಜಿಸಿದ್ದ `ಮಕ್ಕಳ ರಕ್ಷಣೆ’ಗೆ ಸಂಬಂಧಿಸಿದ ಕಾನೂನು ಅರಿವು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಮಕ್ಕಳ ಯೋಗಕ್ಷೇಮದ ದೃಷ್ಟಿಯಿಂದ ಇಂತಹ ಕಾರ್ಯ ಕ್ರಮ ಆಯೋಜಿಸಲಾಗುತ್ತಿದ್ದು, ಪೋಷಕರಿರುವ ಮಕ್ಕಳನ್ನು ಪೋಷಕರು ನೋಡಿಕೊಳ್ಳುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದ ಪೋಷಕರು ತಮ್ಮ ಮಕ್ಕಳ ಬಗ್ಗೆ ಅಸಡ್ಡೆ ತೋರುವುದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಕಾನೂನು ಅರಿವು ಕಾರ್ಯಕ್ರಮ ನಡೆಸುತ್ತಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನ್ಯಾಯಾಧೀಶರಾದ ದೇವರಾಜ ಭೂತೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಮಕ್ಕಳಾಲಯದ ನಿರ್ದೇಶಕ ಫಾ.ಸಿಜು ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಬಸವರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಜಿ.ಎಸ್.ಅಭಿಕುಮಾರ್, ಡಾನ್ ಬಾಸ್ಕೋ ಸಂಸ್ಥೆ ಪೋಷಕತ್ವ ಯೋಜನೆ ರಾಜ್ಯ ಸಂಯೋ ಜಕ ಶಿವಮಲ್ಲು, ಟೋನಿ, ಪದ್ಮಶ್ರೀ ಇತರರು ಉಪಸ್ಥಿತರಿದ್ದರು.