ಜೀವ ಬಹಳ ಅಮೂಲ್ಯ… ಕುಟುಂಬವೂ ಅಷ್ಟೇ ಮುಖ್ಯ… ಹುಷಾರಾಗಿ ಕೆಲಸ ನಿರ್ವಹಿಸಿ

ಮೈಸೂರು, ನ.21(ಆರ್‍ಕೆಬಿ)- ವಿದ್ಯು ಚ್ಛಕ್ತಿ ಮಂಡಳಿಯಲ್ಲಿ ಲೈನ್‍ಮೆನ್‍ಗಳ ಪಾತ್ರ ಬಹಳ ಮಹತ್ವದ್ದಾಗಿದ್ದು, ಕಂಬ ಹತ್ತಿ ಕೆಲಸ ನಿರ್ವಹಿಸುವಾಗ ಬಹಳ ಹುಷಾರಾಗಿರ ಬೇಕು. ಏಕೆಂದರೆ ಜೀವ ಬಹಳ ಅಮೂಲ್ಯವಾದದ್ದು. ಹೆಂಡತಿ ಮಕ್ಕಳೂ ಸಹ ಅಷ್ಟೇ ಮುಖ್ಯ ಎಂದು ಅಬಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಹೆಚ್.ನಾಗೇಶ್ ಲೈನ್‍ಮೆನ್‍ಗಳಿಗೆ ಸಲಹೆ ನೀಡಿದರು.

ಮೈಸೂರಿನ ದಟ್ಟಗಳ್ಳಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ಸಮುದಾಯ ಭವನ ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ, ಕಡಕೊಳದ ಬಳಿಯಿರುವ ಸಂಘದ ಸೂರ್ಯರಾವ್ ಸಭಾಂಗಣದಲ್ಲಿ 41ನೇ ವರ್ಷದ ಸರ್ವ ಸದಸ್ಯರ ಸಭೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯ ನಿರ್ವಹಣೆಯಲ್ಲಿ ಲೈನ್‍ಮೆನ್ ಗಳು ಹಾಗೂ ಇಂಜಿನಿಯರುಗಳು ನಿರ್ಣಾ ಯಕ ಪಾತ್ರ ವಹಿಸುತ್ತಾರೆ. ನಿಮ್ಮಿಂದಲೇ ನಮ್ಮ ಸಂಸ್ಥೆ ನಡೆಯುತ್ತಿದೆ ಎಂದು ಶ್ಲಾಘಿಸಿದರು. ನಾನು ಕೆಇಬಿಯಲ್ಲಿ ಸಾಕಷ್ಟು ವರ್ಷ ಕೆಲಸ ನಿರ್ವಹಿಸಿದ್ದೆ ಎಂಬುದನ್ನು ಪ್ರಸ್ತಾಪಿಸಿದ ಸಚಿವ ನಾಗೇಶ್, ನಾನು ಕೆಇಬಿ ಋಣ ತಿಂದಿದ್ದೇನೆ. ಈಗ ಸಚಿವನಾಗಿ ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿ, ಕೆಇಬಿಯ ಋಣ ತೀರಿಸಬೇಕಾಗಿದೆ ಎಂದು ಹೇಳಿದರು.

ಸೇವೆಯೇ ನಮ್ಮ ಸುಯೋಗ, ಇಲಾಖೆಯ ಇಂಜಿನಿಯರುಗಳು, ನೌಕರರಿಗೆ ಜವಾ ಬ್ದಾರಿಯಿದೆ. ಇಲಾಖೆ ನೀಡಿದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಕರೆ ನೀಡಿ ದರು. ವಿದ್ಯುಚ್ಛಕ್ತಿ ಮಂಡಳಿಯ ಲೈನ್‍ಮೆನ್ ಗಳು, ನೌಕರರಿಗೆ ವಿಧಾನಸೌಧದ ತಮ್ಮ ಕಚೇರಿ ಸದಾ ತೆರೆದಿರುತ್ತದೆ. ಮಧ್ಯಾಹ್ನ 3 ಗಂಟೆಯ ಬಳಿಕ ಬನ್ನಿ, ನಿಮ್ಮ ಯಾವುದೇ ಕೆಲಸ, ಮಕ್ಕಳಿಗೆ ಉದ್ಯೋಗ ಇತ್ಯಾದಿಗಳಿಗೆ ನನ್ನ ಸಹಕಾರ ಎಂದಿಗೂ ಇದೆ ಎಂದರು.

ಮಕ್ಕಳಿಗೆ ಚೆನ್ನಾಗಿ ಓದಿಸಿ: ಹಿಂದಿನ ಕಾಲ ದಲ್ಲಿ ಅಷ್ಟೊಂದು ಮಕ್ಕಳಿದ್ದರೂ ನಮ್ಮ ಹಿರಿಯರು ಎಲ್ಲರನ್ನೂ ಓದಿಸಿ ವಿದ್ಯಾವಂತ ರನ್ನಾಗಿ ಮಾಡುತ್ತಿದ್ದರು. ಆದರೆ ಇಂದು ಇರುವ ಒಂದೆರಡು ಮಕ್ಕಳನ್ನೇ ಓದಿಸಲು ಕಷ್ಟಪಡುತ್ತಿದ್ದಾರೆ ಎಂದ ಅವರು, ಮಕ್ಕ ಳಿಗೆ ಚೆನ್ನಾಗಿ ಓದಿಸಿ, ಜೊತೆಗೆ ಕುಟುಂಬ ಯೋಜನೆ ಕುರಿತಂತೆ ಹೆಚ್ಚು ಪ್ರಚಾರ ಮಾಡುವಂತೆಯೂ ಕರೆ ನೀಡಿದರು.

ಡಾ.ರಾಜ್ ಸ್ಮರಿಸಿದ ಸಚಿವ: ಕನ್ನಡಕ್ಕಾಗಿ ಗೋಕಾಕ್ ಚಳವಳಿಯ ಮುಂಚೂಣಿ ಯಲ್ಲಿದ್ದು ಹೋರಾಡಿದ ಡಾ.ರಾಜ್ ಕುಮಾರ್ ಅವರನ್ನು ಸ್ಮರಿಸಿದ ಅವರು, ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಿದ್ದು, ಎಲ್ಲರೂ ಕನ್ನಡ ಕಲಿತು, ಇತರರಿಗೂ ಕನ್ನಡ ಕಲಿಸುವ ಮೂಲಕ ಕನ್ನಡದ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.

ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲೆಗಳು ಅಚ್ಚ ಮತ್ತು ಸ್ವಚ್ಛ ಕನ್ನಡದ ಪ್ರದೇಶಗಳು. ಆದರೆ ಬೆಂಗಳೂರಿನಲ್ಲಿ ಶೇ.32ರಷ್ಟು ಮಾತ್ರ ಕನ್ನಡಿಗರಿದ್ದಾರೆ ಎಂದ ಅವರು, ಆಡು ಭಾಷೆ, ಆಡಳಿತ ಭಾಷೆ ಕನ್ನಡ ಉಳಿಸಿ, ಬೆಳೆಸಬೇಕಿದೆ ಎಂದು ಅವರು ಹೇಳಿದರು.

ದಕ್ಷಿಣ ಭಾರತದ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಹಾಮಂಡಳಿ ಪ್ರಾಂತೀಯ ಅಧ್ಯಕ್ಷ ಕೆ.ಜಯಪ್ರಕಾಶ್ ರಾವ್ ಕನ್ನಡ ರಾಜ್ಯೋತ್ಸವದ ವಿಶೇಷ ಉಪನ್ಯಾಸ ನೀಡಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಇಂಜಿನಿಯರ್ ಹಾಗೂ ಕರ್ನಾಟಕ ವಿದ್ಯು ಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ವಲಯ ಕೇಂದ್ರದ ಅಧ್ಯಕ್ಷ ಎಂ.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಸೆಸ್ಕಾಂ ಮೈಸೂರು ಮುಖ್ಯ ಆರ್ಥಿಕ ಅಧಿಕಾರಿ ಎ.ಶಿವಣ್ಣ, ಇಂಜಿನಿಯರುಗಳ ಸಂಘದ ಬೆಂಗಳೂರು ಅಧ್ಯಕ್ಷ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕ ಟಿ.ಎಂ.ಶಿವಪ್ರಕಾಶ್, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ತಿಪ್ಪೇಸ್ವಾಮಿ, ಪ್ರಸರಣ ನಿಗಮದ ಮುಖ್ಯ ಇಂಜಿನಿಯರ್ ಹಾಗೂ ಸಂಘದ ವಲಯ ಕೇಂದ್ರದ ಉಪಾ ಧ್ಯಕ್ಷ ಕೋದಂಡಪಾಣಿ, ಹಿರಿಯ ಉಪಾ ಧ್ಯಕ್ಷ ಕೆ.ಎಂ.ಮುನಿಗೋಪಾಲರಾಜು ಇನ್ನಿತರರು ಉಪಸ್ಥಿತರಿದ್ದರು.