ಬಾರ್, ಕ್ಲಬ್, ಲಾಡ್ಜ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ

ಬೆಂಗಳೂರು, ಮೇ 8(ಕೆಎಂಶಿ)-ಬಾರ್, ಕ್ಲಬ್ ಹಾಗೂ ಲಾಡ್ಜ್‍ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್7, ಸಿಎಲ್9 ಹೊಂದಿರುವವರು ಎಂಆರ್‍ಪಿ ದರದಲ್ಲಿ ಪಾರ್ಸೆಲ್ ಮಾತ್ರ ಮಾರಾಟ ಮಾಡಬಹುದು. ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ದರೆ ಲೈಸೆನ್ಸ್ ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬೆಳಿಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಪಾರ್ಸಲ್‍ನಲ್ಲಿ ಮಾರಾಟ ಮಾಡಬಹುದು. ಕಂಟೇನ್ಮೆಂಟ್ ಝೋನ್ ಬಿಟ್ಟು ಬೇರೆಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡ ಲಾಗಿದೆ. ಗಡಿಗಳಲ್ಲಿರುವ ರಾಜ್ಯದ ಮದ್ಯದಂಗಡಿಗಳಿಗೆ ಆಧಾರ್ ಕಾರ್ಡ್ ತೋರಿಸಿ ಮದ್ಯ ಖರೀದಿಗೆ ಅವ ಕಾಶ, ಹೊರ ರಾಜ್ಯದವರು ಗಡಿ ದಾಟಿ ಬರದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದರು.

ತೆರಿಗೆ ಹೆಚ್ಚಳದ ನಂತರ ಇಂದು ಮಧ್ಯಾಹ್ನದವರೆಗೆ 121 ಕೋಟಿ ರೂ. ಮದ್ಯದ ತೆರಿಗೆ ಸಂಗ್ರಹವಾಗಿದೆ. ಕಳೆದ 5 ದಿನದಲ್ಲಿ 767.21 ಕೋಟಿ ತೆರಿಗೆ ಸಂಗ್ರಹವಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಒಂದು ವಾರದಲ್ಲಿ ಒಂದು ಸಾವಿರ ಕೋಟಿ ರೂ.ಆದಾಯ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಮದ್ಯ ಮಾರಾಟ ಮುಂದುವರೆಯಬೇಕಾದರೆ ಮದ್ಯ ಪ್ರಿಯರು ಗೌರವದಿಂದ ನಡೆದುಕೊಳ್ಳಬೇಕು. ಮದ್ಯ ಪಾರ್ಸಲ್ ಪಡೆದು ಮನೆಗಳಿಗೆ ಹೋಗಿ ಸೇವಿಸಬೇಕು. ರಸ್ತೆ ಬದಿ, ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮದ್ಯಪಾನ ಮಾಡದಂತೆ ಸಚಿವರು ಮನವಿ ಮಾಡಿದರು.

ಚೆಲ್ಲಾಟ ಮುಂದುವರೆದರೆ ಮದ್ಯ ಮಾರಾಟ ನಿರ್ಬಂಧ ಕುರಿತು ಚಿಂತಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಆನ್‍ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ನಾವು ಅದನ್ನು ಪರಿಶೀಲಿ ಸುತ್ತೇವೆ ಎಂದರು. ಒಂದೇ ಬಿಲ್‍ನಲ್ಲಿ 55 ಸಾವಿರ ರೂ. ಮೌಲ್ಯದ ಮದ್ಯ ಮಾರಾಟ ಪ್ರಕರಣ ಸಂಬಂಧ ಬೆಂಗಳೂರಿನ ಮದ್ಯದ ಅಂಗಡಿ ಮೇಲೆ ದಾಳಿ ನಡೆಸಿ, ತನಿಖೆ ನಡೆಯುತ್ತಿದೆ, ತನಿಖಾ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆ.

ಒಬ್ಬರಿಗೆ 2.3 ಲೀಟರ್ ಮದ್ಯ ಮಾರಲು ಮಾತ್ರ ಅವಕಾಶ ಇದೆ. ಹಾಗಾಗಿ ಅಂಗಡಿಗಳು ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಅಬಕಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಈವರೆಗೆ 1200 ಕೇಸ್ ದಾಖಲು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಗಳಿಗೆ `ಸುಪ್ರೀಂ’ ಸಲಹೆ
ನವದೆಹಲಿ, ಮೇ 8- ಮಾರಕ ಕೊರೊನಾ ವೈರಸ್ ಅಬ್ಬರ ಭಾರತದಲ್ಲಿ ಜೋರಾಗಿ ರುವಂತೆಯೇ ಕೇಂದ್ರ ಸರ್ಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ನೀಡಿದ್ದು, ಮದ್ಯ ಮಾರಾಟದ ಬದಲು ಹೋಂ ಡಿಲಿವರಿ ಮಾಡುವ ಕುರಿತು ರಾಜ್ಯ ಸರ್ಕಾರಗಳು ಚಿಂತಿಸಲಿ ಎಂದು ಸಲಹೆ ನೀಡಿದೆ. ಕೊರೊನಾ ಕಾರಣಕ್ಕೆ ಭಾರತ ದಲ್ಲಿ ಮೂರು ಹಂತದಲ್ಲಿ ಲಾಕ್‍ಡೌನ್ ಘೋಷಿಸಲಾ ಗಿತ್ತು. ಅಲ್ಲದೆ, ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ಜನರಿಗೆ ಸೂಚನೆಯನ್ನೂ ನೀಡಲಾ ಗಿತ್ತು. ಇದೇ ಕಾರಣಕ್ಕೆ ಬರೋಬ್ಬರಿ 45 ದಿನಗಳ ಕಾಲ ದೇಶದಾದ್ಯಂತ ಮದ್ಯ ಮಾರಾಟವನ್ನು ಸ್ಥಗಿತಗೊಳಿಸ ಲಾಗಿತ್ತು. ಆದರೆ, ಇದೀಗ ಲಾಕ್‍ಡೌನ್ ಸಡಿಲಿಸಿರುವ ಕಾರಣ ಕಳೆದ ಸೋಮವಾರದಿಂದ ದೇಶದೆಲ್ಲೆಡೆ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯದಂಗಡಿಗಳ ಮೇಲೆ ಮುಗಿಬಿದ್ದಿರುವ ಮದ್ಯಪ್ರಿಯರು ಸಾಮಾಜಿಕ ಅಂತರ ಮತ್ತು ಇತರೆ ಮುಂಜಾಗ್ರತಾ ಕ್ರಮಗಳನ್ನು ಮರೆತು ಮದ್ಯ ಖರೀದಿ ಮಾಡುತ್ತಿದ್ದಾರೆ.

ಇದೇ ವಿಚಾರ ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮದ್ಯದ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಿದೆ, ಇದರಿಂದ ಕೊರೊನಾ ವ್ಯಾಪಕವಾಗಿ ಹರಡಲಿದೆ ಎಂದು ಸುಪ್ರೀಂ ಕೋರ್ಟ್‍ನಲ್ಲಿ ಪಿಐಎಲ್ ದಾಖಲಿಸಲಾಗಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆಸಿ ರುವ ಸುಪ್ರೀಂಕೋರ್ಟ್, ಸಮಾಜದಲ್ಲಿ ಕೊರೊನಾ ಹರಡದಂತೆ ನೋಡಿಕೊಳ್ಳಲು ಹಾಗೂ ಸಾಮಾಜಿಕ ಅಂತರದ ಹಿತದೃಷ್ಟಿಯಿಂದ ಎಲ್ಲಾ ರಾಜ್ಯಗಳು ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವ ಬದಲು ಹೋಂ ಡೆಲಿವರಿ ಮಾಡುವುದು ಸೂಕ್ತ. ಸಾಮಾ ಜಿಕ ಅಂತರದ ದೃಷ್ಟಿಯಿಂದ ಹೋಂ ಡಿಲಿವರಿ ಸೂಕ್ತ. ಆನ್‍ಲೈನ್ ಮೂಲಕ ಮನೆಗಳಿಗೆ ಮದ್ಯವನ್ನು ವಿತರಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.