ಮೈಸೂರು, ಮೇ 3(ಎಸ್‍ಬಿಡಿ)-ಮೈಸೂರು ನಗರದಲ್ಲಿ ವಾಣಿಜ್ಯ ರಸ್ತೆಗಳನ್ನು ಹೊರತುಪಡಿಸಿ ಉಳಿ ದೆಲ್ಲೆಡೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾ ಗಿದೆ. ಅದೇ ವೇಳೆ ಗ್ರಾಮಾಂತರ ಪ್ರದೇಶದಲ್ಲಿ ಮಾಲ್ ಹೊರತು ಪಡಿಸಿ ಎಲ್ಲಾ ರೀತಿಯ ಅಂಗಡಿಗಳನ್ನೂ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಲಾಕ್‍ಡೌನ್ 3ನೇ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಸಂಚಾರ, ವ್ಯಾಪಾರ-ವಹಿವಾಟು, ಕಟ್ಟಡ ನಿರ್ಮಾಣ, ಕೈಗಾರಿಕೆ ಇನ್ನಿತರ ಆರ್ಥಿಕ ಚಟುವಟಿಕೆ ಗಳ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರಪಾಲಿಕೆ ಆಯುಕ್ತ ಗುರು ದತ್ ಹೆಗಡೆ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭಾನುವಾರ ಫೇಸ್‍ಬುಕ್ ಲೈವ್ ಮೂಲಕ ಸಮಗ್ರ ವಿವರ ನೀಡಿದ್ದಾರೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಸೋಮವಾರ(ಮೇ 4)ದಿಂದ ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಉತ್ಪಾ ದಿಸುವ ಕೈಗಾರಿಕೆಗಳಿಗೆ ಮಾತ್ರ ಅವಕಾಶ ವಿದ್ದು, ಗ್ರಾಮಾಂತರ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಕೈಗಾರಿಕೆಗಳೂ ಕಾರ್ಯಾರಂಭಿಸಬಹುದು. ಆದರೆ ಶೇ.33ರಷ್ಟು ಕಾರ್ಮಿಕರ ಬಳಕೆ ಸೇರಿದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸಂಚರಿಸುವಾಗ ಸಂಸ್ಥೆಯ ಗುರುತಿನ ಚೀಟಿ ಇದ್ದರೆ ಸಾಕು. ಬೇರೆ ಯಾವುದೇ ಪಾಸ್ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
ಅಂಗಡಿ ಮುಂಗಟ್ಟು: ಮೈಸೂರು ನಗರ ವ್ಯಾಪ್ತಿಯ ಮಾರುಕಟ್ಟೆ ಹಾಗೂ ಮಾರುಕಟ್ಟೆ ಕಾಂಪ್ಲೆಕ್ಸ್, ವಾಣಿಜ್ಯ ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಉಳಿದಂತೆ ಅಪಾರ್ಟ್‍ಮೆಂಟ್, ಜನವಸತಿ ಬಡಾವಣೆಗಳಲ್ಲಿ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ರೀತಿಯ ಮಳಿಗೆಗಳನ್ನೂ ತೆರೆಯಬಹುದು. ಗ್ರಾಮಾಂತರ ಪ್ರದೇಶದಲ್ಲಿ ಮಾಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳ ತೆರೆದು ವ್ಯಾಪಾರ ವಹಿವಾಟು ನಡೆಸ ಬಹುದು. ಖಾಸಗಿ ಸಂಸ್ಥೆ, ಕಚೇರಿಗಳಲ್ಲೂ ಶೇ.33ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯಾ ರಂಭ ಮಾಡಲು ಅನುಮತಿ ನೀಡಲಾಗಿದೆ. ಈ ಹಿಂದಿನಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು, 50 ಜನ ಮೀರದಂತೆ ವಿವಾಹ ಕಾರ್ಯಕ್ರಮ ನಡೆಸಬಹುದು. ಹಾಗೆಯೇ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳುವವರು 20 ಜನ ಮೀರದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂಬಂಧ ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾತನಾಡಿ, ಮೈಸೂರು ನಗರ ವ್ಯಾಪ್ತಿಯಲ್ಲಿ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ 91 ವಾಣಿಜ್ಯ ರಸ್ತೆಗಳಲ್ಲಿ ಹಾಲು, ತರಕಾರಿ, ಮೆಡಿಕಲ್ಸ್, ಪ್ರಾವಿಷನ್ ಸ್ಟೋರ್ಸ್‍ಗಳನ್ನು ಮಾತ್ರ ತೆರೆಯಬಹುದು. ಉಳಿದೆಡೆ ಎಲ್ಲಾ ಅಂಗಡಿಗಳನ್ನೂ ತೆರೆದು ವ್ಯಾಪಾರ ವಹಿವಾಟು ನಡೆಸಬಹುದು ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಸಂಜೆ 7ರವರೆಗೂ ಅಂಗಡಿ ಮುಂಗಟ್ಟುಗಳು ತೆರೆದಿರುವ ಕಾರಣ, ವಾಹನ ಸಂಚಾರಕ್ಕೆ ಅವಕಾಶವಿರುತ್ತದೆ. ಆದರೆ ಯಾರೂ ಸಹ ಅನಗತ್ಯವಾಗಿ ಓಡಾಡಬಾರದು. ದಿಢೀರ್ ಕಾರ್ಯಾಚರಣೆ ನಡೆಸಿ, ನಿಯಮ ಪಾಲಿಸದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಾರ್ಖಾನೆ, ಖಾಸಗಿ ಸಂಸ್ಥೆಗಳು ಕಾರ್ಯಾರಂಭವಾಗುವುದರಿಂದ ವಾಹನ ಚಾಲನೆ ಬರದವರು ಬೇರೆಯವ ರಿಂದ ಡ್ರಾಪ್ ತೆಗೆದುಕೊಳ್ಳಲು ಅವಕಾಶವಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಹಾಗೂ 4 ಚಕ್ರ ವಾಹನದಲ್ಲಿ ಚಾಲಕ ಸೇರಿ 3 ಮಂದಿ ಸಂಚರಿಸಬಹುದು. ಸಂಸ್ಥೆಯ ಗುರುತಿನ ಚೀಟಿ ತೋರಿಸಿದರೆ ಸಾಕು, ನಮ್ಮಿಂದ ಪಾಸ್ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಿರ್ಮಾಣ ಕಾಮಗಾರಿ: ನಗರ ವ್ಯಾಪ್ತಿಯಲ್ಲಿ ಕಾರ್ಮಿಕರು ವಾಸವಿರುವ ಹಾಗೂ ಅಗತ್ಯ ಸಾಮಗ್ರಿಗಳು ಲಭ್ಯವಿರುವ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿ ನಡೆಸಬಹುದು. ಅಂದರೆ ಹೊರಗಡೆಯಿಂದ ಕಾರ್ಮಿಕರ ಕರೆತರಲು ಹಾಗೂ ದೂರದಿಂದ ಸಾಮಗ್ರಿ ತಂದು ಕೆಲಸ ಮಾಡಿಸಲು ಅವಕಾಶವಿರುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗೆ ಅವಕಾಶವಿದೆ. ಅಲ್ಲದೆ ಕಲ್ಲು, ಜಲ್ಲಿ, ಸಿಮೆಂಟ್, ಹಾರ್ಡ್‍ವೇರ್ ಸೇರಿದಂತೆ ನಿರ್ಮಾಣ ಕಾಮಗಾರಿಗೆ ಅಗತ್ಯವಾದ ಎಲ್ಲಾ ರೀತಿಯ ವಸ್ತುಗಳ ಮಾರಾಟಕ್ಕೂ ಅನುಮತಿ ನೀಡಲಾಗಿದೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರೂ ಮುಖಗವಸು ಧರಿಸಬೇಕು. ಸಾರ್ವಜನಿಕವಾಗಿ ಉಗುಳಬಾರದು. ಈ ಬಗ್ಗೆ ಸಂಬಂಧಪಟ್ಟವರು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮದ್ಯ-ಗುಟ್ಕಾ: ಮೈಸೂರು ಜಿಲ್ಲೆಯಲ್ಲಿ ಎಂಎಸ್‍ಐಎಲ್ ಹಾಗೂ ಸಿಎಲ್-2 ಕೇಂದ್ರಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿಸಲಾಗಿದೆ. ಪಾನ್, ಗುಟ್ಕಾ, ತಂಬಾಕು ಮಾರಾಟಕ್ಕೂ ಅವಕಾಶವಿದ್ದು, ಸಾರ್ವಜನಿಕ ಸ್ಥಳದಲ್ಲಿ ಬಳಸುವಂತಿಲ್ಲ. ದಂತ ಚಿಕಿತ್ಸಾಲಯದ ಸೇವೆ ಆರಂಭಿಸುವ ಬಗ್ಗೆ ಇನ್ನೂ ಸ್ಪಷ್ಟವಾಗಬೇಕಿದೆ. ಮುಖ್ಯವಾಗಿ ಕೆಲಸ ಮಾಡುವ ಸ್ಥಳ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮುಖಗವಸು ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮುಕಗವಸು ಎಂದರೆ ಮಾಸ್ಕ್ ಮಾತ್ರವಲ್ಲ, ಕರವಸ್ತ್ರ, ಟವಲ್ ಸೇರಿದಂತೆ ಸ್ವಚ್ಛವಾದ ಯಾವುದೇ ಬಟ್ಟೆಯಿಂದ ಮೂಗು, ಬಾಯಿಯನ್ನು ಕವರ್ ಮಾಡಿಕೊಳ್ಳಬೇಕು. ಇದನ್ನು ಮೀರಿದವರಿಗೆ ನಗರ ವ್ಯಾಪ್ತಿಯಲ್ಲಿ 200 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ ಎಂದು ಎಚ್ಚರಿಸಿದರು.
ಆಟೋ-ಸಲೂನ್ ಸದ್ಯಕ್ಕಿಲ್ಲ: ರೆಡ್‍ಜೋನ್‍ನಲ್ಲಿರುವ ಕಾರಣ ಜಿಲ್ಲೆಯಲ್ಲಿ ಸ್ಪಾ, ಸಲೂನ್, ಬಾರ್ಬರ್ ಶಾಪ್, ಆಟೋ, ಟ್ಯಾಕ್ಸಿ ಸೇವೆಗೆ ಸದ್ಯಕ್ಕೆ ಅವಕಾಶವಿಲ್ಲ. ಆರೆಂಜ್ ಜೋನ್ ವ್ಯಾಪ್ತಿಗೆ ಬಂದ ನಂತರದಲ್ಲಿ ಇದಕ್ಕೆಲ್ಲಾ ಅನುಮತಿ ದೊರಕಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.