ಬೆಂಗಳೂರು ಉತ್ತರ ಸಹವಾಸ ಬೇಡ

ಬೆಂಗಳೂರು: ಬೆಂಗಳೂರು ನಗರ ಮತದಾರರನ್ನು ನಂಬಿ ನೀವು ಉತ್ತರ ಕ್ಷೇತ್ರದಿಂದ ಸ್ಪರ್ಧಿಸ ಬೇಡಿ. ಮೈಸೂರು ಕ್ಷೇತ್ರದಿಂದ ಕಣಕ್ಕಿಳಿ ಯಿರಿ, ನಾವು ನಿಮ್ಮನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮನವಿ ಮಾಡಿಕೊಂಡಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಬೇಡ ಎಂದು ಸ್ಪಷ್ಟವಾಗಿ ತಮ್ಮ ತಂದೆ ಯವರಿಗೆ ತಿಳಿಸಿರುವುದಲ್ಲದೆ, ನೀವು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಯಿರಿ ಎಂದು ಸಲಹೆ ಮಾಡಿದ್ದಾರೆ. ಆದರೆ ದೇವೇಗೌಡರು ಮಾತ್ರ ನಾನು ಇನ್ನು ಮೂರು ನಾಲ್ಕು ದಿನ ಏನನ್ನೂ ಹೇಳುವುದಿಲ್ಲ, ನೋಡೋಣ ಎಂದು ತಮ್ಮ ಪಕ್ಷದ ಉಭಯ ನಾಯಕರಿಗೂ ತಿಳಿಸಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಕುಮಾರಸ್ವಾಮಿ ಅವರು ಇಂದು ಖಾಸಗಿ ಹೋಟೆಲ್‍ನಲ್ಲಿ, ತುಮಕೂರು ಜಿಲ್ಲೆಯ ತಮ್ಮ ಪಕ್ಷದ ಸಚಿವರು, ಶಾಸಕರು, ಮುಖಂಡರ ಜೊತೆ ಕ್ಷೇತ್ರದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು. ದೇವೇಗೌಡರನ್ನು ನಿನ್ನೆ ವಿಶ್ವನಾಥ್ ಅವರು ಭೇಟಿ ಮಾಡಿ, ಮೈಸೂರಿನಿಂದಲೇ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದಾರೆ. ನೀವು ನಾಮಪತ್ರ ಸಲ್ಲಿಸಿ ಹೋಗಿ, ನಾನು, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಿಮ್ಮನ್ನು ಬಹಳ ಅಂತರದಿಂದ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತೇವೆ.

ಬೆಂಗಳೂರು ನಗರದ ಮತದಾರರನ್ನು ನಂಬುವುದು ಕಷ್ಟ. ಅವರು ವಿಧಾನಸಭೆಗೆ ಒಂದು ರೀತಿ ಇದ್ದರೆ, ಲೋಕಸಭೆಗೆ ಮತ್ತೊಂದು ರೀತಿ ಇರುತ್ತಾರೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕುವುದು ಬೇಡ. ಇದು ನನ್ನ ಅಭಿಪ್ರಾಯವಷ್ಟೇ ಎಂದಿದ್ದಾರೆ.
ಮೈಸೂರು ಕ್ಷೇತ್ರದ ಮತದಾರರ ಹಿಡಿತ ನಮಗೆ ತಿಳಿದಿದೆ. ನೀವು ಕಣಕ್ಕಿಳಿದರೆ, ಜೆಡಿಎಸ್‍ಗೆ ಒಂದು ಕ್ಷೇತ್ರ ಹೆಚ್ಚಾಗಿ ದೊರೆಯಲಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಚುನಾವಣಾ ಮೈತ್ರಿ ಮತ್ತು ಅಭ್ಯರ್ಥಿಗಳ ಆಯ್ಕೆ ಕುರಿತಂತೆಯು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ನಾಯಕರು ಏನೇ ಹೇಳಿಕೊಳ್ಳಲಿ, ದೆಹಲಿಯಲ್ಲಿ ನಮ್ಮ ಪಕ್ಷಕ್ಕೆ ಎಲ್ಲವೂ ಸರಿ ಹೋಗುತ್ತದೆ. ಅವರು ಮೂರು ನಾಲ್ಕು ದಿನದಲ್ಲಿ ಕ್ಷೇತ್ರ ಹಂಚಿಕೆ ಬಗ್ಗೆ ಅವರೇ ಬಹಿರಂಗಪಡಿಸುತ್ತಾರೆ ಎಂದು ಗೌಡರು, ವಿಶ್ವನಾಥ್‍ಗೆ ಹೇಳಿದ್ದಾರೆ. ಈ ಮಧ್ಯೆ ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಪಕ್ಷದ ಮುಖಂಡರ ಜೊತೆ ಕಚೇರಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದರು.

ಬೆಂಗಳೂರು ಉತ್ತರದಿಂದ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಿದರೂ ಭಯ ಇಲ್ಲ

ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೂ ದೊಡ್ಡ ವರ ಜತೆ ಸ್ಪರ್ಧೆ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಇಂದಿಲ್ಲಿ ಸ್ಪಷ್ಟ ಪಡಿಸಿದ್ದಾರೆ. ಇದುವರೆಗೂ ನನಗಿಂತ ಚಿಕ್ಕವರ ಜೊತೆ ಸ್ಪರ್ಧೆ ಮಾಡಿ ಗೆದ್ದಿ ದ್ದೇನೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸಿದರೂ ನನಗೇನೂ ಭಯವಿಲ್ಲ. ಅದನ್ನು ಗೌರವಯುತವಾಗಿ ಸ್ವೀಕರಿಸಿ ಗೆಲ್ಲುವ ವಿಶ್ವಾಸ ನನಗಿದೆ ಎಂದರು. ತಮ್ಮ 5 ವರ್ಷಗಳ ಮೌಲ್ಯ ಮಾಪನ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬೇರೊಂದು ಕಡೆ ವಲಸೆ ಹೋಗುತ್ತೇನೆ ಎಂದು ಸುದ್ದಿ ಹಬ್ಬಿಸುತ್ತಿರುವವರು ದೇಶದ್ರೋಹಿಗಳು. ಪಕ್ಷ ಟಿಕೆಟ್ ನೀಡಿದರೆ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ನನಗೆ ಮುಖ್ಯ ಹೊರತು, ನನ್ನ ಹಿತಾಸಕ್ತಿ ಮುಖ್ಯವಲ್ಲ ಎಂದು ಪುನರುಚ್ಛರಿಸಿದರು.

ಕಳೆದ ಫೆ.3ರಿಂದಲೇ ಚುನಾವಣಾ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಕ್ಷೇತ್ರದ ಪ್ರಮುಖರು, ಪ್ರಭಾವಿಗಳು, ಮುಖಂಡರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಈಗಾಗಲೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಬೇರೆ ಪಕ್ಷಗಳಿಗಿಂತ ಬಿಜೆಪಿ ಯಾವಾಗಲೂ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಮಾಡಿರುವ ಕೆಲಸಗಳೇ ನಮಗೆ ಶ್ರೀರಕ್ಷೆಯಾಗುತ್ತದೆ. ಬೆಂಗಳೂರು ಉತ್ತರ ವಿಭಾಗದ ಜನತೆ ನನ್ನನ್ನು ಮತ್ತೊಮ್ಮೆ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.