ಮೊದಲ ದಿನವೇ ಮೂವರು ನಾಮಪತ್ರ ಸಲ್ಲಿಕೆ

ಮೈಸೂರು: ರಾಜ್ಯದ 14 ಕ್ಷೇತ್ರ ಗಳಲ್ಲಿ ನಡೆಯಲಿರುವ ಮೊದಲ ಹಂತದ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇಂದು ಅಧಿಕೃತ ಅಧಿಸೂಚನೆ ಹೊರ ಬಿದ್ದಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಭಿರಾಂ ಜಿ ಶಂಕರ್ ಇಂದು ಬೆಳಿಗ್ಗೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಚುನಾವಣಾ ಅಧಿ ಸೂಚನೆ ಹೊರಡಿಸಿ ಅದರ ಪ್ರತಿಗಳನ್ನು ತಮ್ಮ ಕಚೇರಿಯ ಮೊದಲ ಮಹಡಿಯ ಕೋರ್ಟ್ ಹಾಲ್ ಬಳಿ ಸೂಚನಾ ಫಲಕದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದರು.

ಆ ಮೂಲಕ ಅಭ್ಯರ್ಥಿಗಳಾಗ ಬಯಸುವವರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 11 ಗಂಟೆ ಯಿಂದ ಆರಂಭವಾಯಿತು. ಜಿಲ್ಲಾ ಚುನಾವಣಾಧಿ ಕಾರಿಯೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ಪ್ರತಿನಿತ್ಯ ನಾಮಪತ್ರ ಸ್ವೀಕರಿಸಲಿದ್ದಾರೆ.
ಮೂವರಿಂದ ನಾಮಪತ್ರ: ಮೊದಲ ದಿನವಾದ ಇಂದು ಓರ್ವ ಮಹಿಳೆ ಸೇರಿದಂತೆ ಮೂವರು ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧೆ ಬಯಸಿ ನಾಲ್ವರು ಸೂಚಕರೊಂದಿಗೆ ಧಾವಿಸಿ, ತಮ್ಮ ಉಮೇದುವಾರಿಕೆ ಪತ್ರಗಳನ್ನು ಸಲ್ಲಿಸಿದರು. ಬೆಳಿಗ್ಗೆ 11.45 ಗಂಟೆಗೆ ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿಯ ಅಯೂಬ್ ಖಾನ್ ಅವರು ನಾಮಪತ್ರ ಸಲ್ಲಿಸಿದರೆ, ಮಧ್ಯಾಹ್ನ 12.30 ಗಂಟೆ ವೇಳೆಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಕಾಮ್ರೇಡ್ ಪಿ.ಎಸ್.ಸಂಧ್ಯಾ ಅವರು ತಮ್ಮ ಉಮೇದು ವಾರಿಕೆ ಸಲ್ಲಿಸಿದರು. ನಂತರ ಮಧ್ಯಾಹ್ನ 1.10 ಗಂಟೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಓಬಿಸಿ ಘಟಕದ ಉಪಾಧ್ಯಕ್ಷ ಜೆ.ಜೆ.ಆನಂದ, ನಾಲ್ವರು ಸೂಚಕರೊಂದಿಗೆ ನಾಮಪತ್ರ ಸಲ್ಲಿಸಿದರು. ಇಂದು ಮಧ್ಯಾಹ್ನ 3 ಗಂಟೆ ವರೆಗೆ ಒಟ್ಟು ಮೂವರಿಂದ 6 ನಾಮಪತ್ರಗಳು ಸಲ್ಲಿಕೆ ಯಾಗಿದ್ದು, ಸಹಾಯಕ ಚುನಾವಣಾಧಿಕಾರಿ ಜಿ.ಅನು ರಾಧ, ಚುನಾವಣಾ ಶಾಖೆ ಶಿರಸ್ತೇದಾರ್ ರಾಮ ಪ್ರಸಾದ್ ಅವರು ನಾಮಪತ್ರ ಸ್ವೀಕರಿಸುವ ವೇಳೆ ಅಭಿರಾಂ ಜಿ.ಶಂಕರ್ ಅವರೊಂದಿಗೆ ಉಪಸ್ಥಿತರಿದ್ದರು.

ನಿಷೇಧಾಜ್ಞೆ ಜಾರಿ: ನಾಮಪತ್ರ ಸಲ್ಲಿಸುವ ಚುನಾ ವಣಾಧಿಕಾರಿ ಕಚೇರಿ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಗುರುತಿನ ಚೀಟಿ ಹೊಂದಿರುವ ಚುನಾವಣಾ ಪ್ರಕ್ರಿಯೆ ಯಲ್ಲಿ ನಿರತ ಅಧಿಕಾರಿಗಳು ಹಾಗೂ ಡಿಸಿ ಕಚೇರಿ ಸಿಬ್ಬಂದಿ ಹೊರತು ಪಡಿಸಿ ಬೇರೆಯವರಿಗೆ ಪ್ರವೇಶ ನಿಷೇಧಿಸಿ, ಬ್ಯಾರಿಕೇಡ್ ಅಳವಡಿಸಲಾಗಿದೆ. ನಾಮಪತ್ರ ಸಲ್ಲಿಸುವವರು ಹಾಗೂ ನಾಲ್ವರು ಸೂಚಕರು ಮಾತ್ರ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ಪ್ರಥಮ ಬಾರಿಗೆ ಪತ್ರಿಕಾ ಛಾಯಾ ಗ್ರಾಹಕರಿಗೂ ಪ್ರವೇಶ ನಿಷೇಧಿಸಲಾಗಿದ್ದು, ವಾರ್ತಾ ಇಲಾಖೆಯಿಂದಲೇ ನಾಮಪತ್ರ ಸಲ್ಲಿಕೆ ಫೋಟೊ, ವೀಡಿಯೋ ಮಾಡಿ ಮಾಧ್ಯಮದವರಿಗೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ.