ಮಡಿಕೇರಿ ದಸರಾ; ಖಾಸಗಿ ಬಸ್ ನಿಲುಗಡೆ ವಿವರ

ಮಡಿಕೇರಿ: ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಉತ್ಸವದ ಸಂಬಂಧ ವಾಹನ ದಟ್ಟಣೆ, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅ.19 ರಂದು ಮಧ್ಯಾಹ್ನ 2 ಗಂಟೆಯಿಂದ ಅ.20 ರ ಬೆಳಗ್ಗೆ 11 ಗಂಟೆಯವರೆಗೆ ತಾತ್ಕಾಲಿಕ ಸಂಚಾರ ವ್ಯವಸ್ಥೆ ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.

ವಾಹನ ಸಂಚಾರ ವ್ಯವಸ್ಥೆ ಇಂತಿದೆ: ಕುಟ್ಟ, ಗೋಣಿಕೊಪ್ಪ, ಮಾಕುಟ್ಟ, ವಿರಾಜಪೇಟೆ, ಮೂರ್ನಾಡು ಮಾರ್ಗವಾಗಿ ಮಡಿ ಕೇರಿಗೆ ಆಗಮಿಸುವ ಎಲ್ಲಾ ಖಾಸಗಿ ಬಸ್ಸುಗಳು ಮೇಕೇರಿ ಶಾಲೆಯ ಜಂಕ್ಷನ್‍ವರೆಗೆ ಬಂದು ಪ್ರಯಾಣಿಕರನ್ನು ಅಲ್ಲಿ ಇಳಿಸಿ ಬಸ್ಸನ್ನು ವಿರಾಜಪೇಟೆ ರಸ್ತೆ ಕಡೆಗೆ ಮುಖಮಾಡಿ ರಸ್ತೆಯ ಎಡಬದಿಯಲ್ಲಿ ನಿಲುಗಡೆಗೊಳಿಸುವುದು.

ಕರಿಕೆ, ಭಾಗಮಂಡಲ, ನಾಪೋಕ್ಲು ಕಡೆಯಿಂದ ಆಗಮಿಸುವ ಎಲ್ಲಾ ಖಾಸಗಿ ಬಸ್ಸುಗಳನ್ನು ತಾಳತ್ತಮನೆ-ಭಾಗಮಂಡಲ ಜಂಕ್ಷನ್ ಬಳಿ ಪ್ರಯಾಣಿಕರನ್ನು ಇಳಿಸಿ ಬಸ್ಸನ್ನು ಕಾಟಕೇರಿ ಮಾರ್ಗ ವಾಗಿ ಹೋಗುವ ಕಡೆ ಮುಖಮಾಡಿ ರಸ್ತೆಯ ಎಡಭಾಗದಲ್ಲಿ ನಿಲುಗಡೆಗೊಳಿಸುವುದು. ವಿರಾಜಪೇಟೆ ಮತ್ತು ಭಾಗಮಂಡಲ ಕಡೆಗಳಿಂದ ಖಾಸಗಿ ಬಸ್ಸಿನಲ್ಲಿ ಆಗಮಿಸುವ ಪ್ರಯಾಣಿಕರು ಮೇಕೇರಿ-ತಾಳತ್ತಮನೆ ಮಾರ್ಗವಾಗಿ ಸಂಚರಿಸುವ ಕ.ರಾ.ರ.ಸಾರಿಗೆಯ ಮಿನಿ ಬಸ್ಸಿನಲ್ಲಿ ಹತ್ತಿಕೊಂಡು ಮಡಿಕೇರಿಗೆ ಆಗಮಿಸುವುದು ಮತ್ತು ನಿರ್ಗಮಿಸುವುದು.

ಮೈಸೂರು, ಸಿದ್ದಾಪುರ, ಸೋಮವಾರಪೇಟೆ ಕಡೆಗಳಿಂದ ಆಗಮಿಸುವ ಎಲ್ಲಾ ಖಾಸಗಿ ಬಸ್ಸುಗಳು ಆರ್‍ಎಂಸಿ ಯಾರ್ಡ್ ಮೈದಾನದ ಒಳಗಡೆ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವ ಕಾರ್ಯ ಮಾಡುವುದು ಎಂದು ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.