ಬಡ ವಿದ್ಯಾರ್ಥಿಯ ಗುಡಿಸಲಿಗೆ ತೆರಳಿ ಅಭಿನಂದಿಸಿದ ಸಚಿವ ಸುರೇಶ್‍ಕುಮಾರ್
ಬೆಂಗಳೂರು, ಆ.11- ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡುತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.5 ಫಲಿತಾಂಶ ಪಡೆದ ಮಹೇಶನ ಮನೆಗೆ ಖುದ್ದು ಶಿಕ್ಷಣ ಸಚಿವರೇ ಭೇಟಿ ನೀಡಿ ಅಭಿನಂದಿಸಿದರು.
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದು ಕೊಂಡ ಮಹೇಶನಿಗೆ ತಾಯಿಯೇ ಸರ್ವಸ್ವ. ಆತನ ತಾಯಿ ಬದುಕಿನ ಬಂಡಿ ಸಾಗಿಸಲು ಪುಟ್ಟ ಕಂದ(ಮಹೇಶ)ನನ್ನು ಎತ್ತಿಕೊಂಡು ಯಾದಗಿರಿಯಿಂದ ಬೆಂಗಳೂರಿಗೆ ಸುಮಾರು 10 ವರ್ಷಗಳ ಹಿಂದೆಯೇ ಗುಳೆ ಬಂದರು. ಜೀವನಭೀಮಾನಗರದ ಗುಡಿಸಲಿನಲ್ಲಿ ವಾಸವಿದ್ದಾರೆ. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಮಹೇಶ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಪಡೆಯುವ ಮೂಲಕ ಓದಿಗೆ ಛಲ ಇದ್ದರೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ. ಮಹೇಶನ ತಾಯಿ ಮಲ್ಲವ್ವ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಮ್ಮನಿಗೆ ನೆರವಾಗಲು ಮಹೇಶ ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದು ವರಿಸಿದ್ದಾನೆ. ಕಡುಬಡತನದಲ್ಲೂ ಕೂಲಿ ಕೆಲಸ ಮಾಡಿಕೊಂಡೇ ಓದುತ್ತಿರುವ ಮಹೇಶನನ್ನು ಭೇಟಿ ಮಾಡಲು ಅವರ ಗುಡಿಸಲಿಗೆ ಸಚಿವ ಸುರೇಶ್‍ಕುಮಾರ್ ಬಂದಿದ್ದರು. ಅವನ ಮನೆಯೆಂದು ಕರೆಯಬಹುದಾದ ಪುಟ್ಟ ಗುಡಿಸಲಿನ ಒಳಗೆ ಕೆಲ ಸಮಯ ಕುಳಿತ ಸಚಿವರು, ಮಹೇಶ ಮತ್ತು ಆತನ ತಾಯಿ ಜತೆ ಚರ್ಚಿಸಿದರು. ಅವನ ಮನೆ, ಕುಟುಂಬ, ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲವನ್ನೂ ಕಂಡ ಸಚಿವರು ಭಾವುಕರಾದರು. ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿದರು.