ಮಂಡ್ಯ ಜಿಲ್ಲೆ ರೈತರ ಹಿತಕ್ಕೆ ನಿರಂತರ ಹೋರಾಟ

ಮದ್ದೂರು, ಜು.13- ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಕೊಟ್ಟ ಮಾತಿನಂತೆ ಅಕ್ರಮ ಗಣಿಗಾರಿಕೆ ತಡೆ, ಮೈಷುಗರ್ ಪುನರ್ ಆರಂಭ, ಹಾಲು ಉತ್ಪಾದಕರ ಹಿತ ಕಾಯಲು ತಮ್ಮ ಹೋರಾಟಗಳು ನಿರಂತರವೆಂದು ಸಂಸದೆ ಸುಮಲತಾಅಂಬರೀಷ್ ತಿಳಿಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಮನ್‍ಮುಲ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಹಾಲು-ನೀರು ಮಿಶ್ರಿತ ಪ್ರಕರಣ ಹಾಗೂ ಮನ್‍ಮುಲ್ ಅವ್ಯವಹಾರ ಸಿಬಿಐ ತನಿಖೆಗೆ ವಹಿಸುವ ಸಂಬಂಧÀ ಆಯೋ ಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಮಂಡ್ಯ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದ ಹಾಲು ಉತ್ಪಾದಕರು ಮತ್ತು ರೈತ ಸಂಘದ ಸದಸ್ಯರ ಧರಣಿ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಂಸದೆಯಾಗಿ ತಾನು ಯಾವುದೇ ಆಕ್ಷೇಪವೆತ್ತಿದರೂ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಿರುವುದಾಗಿ ದೂರಿದರು.

ಅಕ್ರಮಗಳ ವಿರುದ್ಧ ದನಿ ಎತ್ತಿದರೆ ಮುಗಿ ಬೀಳುವ ನೀವು ಅಕ್ರಮ ಗಣಿಗಾರಿಕೆ, ಮನ್‍ಮುಲ್ ಅವ್ಯವಹಾರ ಕುರಿತು ತುಟಿ ಬಿಚ್ಚುತ್ತಿಲ್ಲವೇಕೆಂದು ಪರೋಕ್ಷವಾಗಿ ದಳಪತಿಗಳನ್ನು ಪ್ರಶ್ನಿಸಿದರಲ್ಲದೇ, ಕಾವೇರಿ ನದಿ ನೀರು ಸಮಸ್ಯೆ, ಅಕ್ರಮ ಗಣಿಗಾರಿಕೆ ಮತ್ತಿತರ ವಿಚಾರವಾಗಿ ಜಿಲ್ಲೆಯ ಮತ್ತು ರಾಜ್ಯದ ಪರ ಈಗಾಗಲೇ ಸಂಸತ್‍ನಲ್ಲಿ ಚರ್ಚಿಸಿರುವುದಲ್ಲದೆ, ಮೈಷುಗರ್ ಕಾರ್ಖಾನೆ ಯನ್ನು ಖಾಸಗೀಕರಣ ಮಾಡಬೇಕೆಂದು ತಾವು ಎಲ್ಲಿಯೂ ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.

ಈ ಹಿಂದೆ ನೂರಾರು ಕೋಟಿ ರೂ. ಅನುದಾನ ನೀಡಿದ್ದರೂ ಮೈಷುಗರ್ ಅಭಿವೃದ್ಧಿ ಆಗಿಲ್ಲವೆಂಬ ವರದಿ ಮೇರೆಗೆ ಜಿಲ್ಲೆಯ ಕಬ್ಬು ಬೆಳೆಗಾರರ ಹಿತ ದೃಷ್ಠಿ ಯಿಂದ ಸರಕಾರ ನಡೆಸಲು ಸಾಧ್ಯವಾಗ ದಿದ್ದಲ್ಲಿ ಬದಲೀ ಮಾರ್ಗವನ್ನೂ ಅನುಸರಿಸು ವಂತೆ ಸಲಹೆ ನೀಡಿದ್ದಾಗಿ ಸ್ಪಷ್ಟನೆ ನೀಡಿದರು.
ಅಂಬರೀಷ್ ನಮ್ಮನಗಲಿ ಎರಡು ವರ್ಷಗಳಾಗಿದ್ದು, ಅವರ ವಿಚಾರವನ್ನು ಪ್ರತಿ ಬಾರಿಯೂ ಟೀಕಾಸ್ತ್ರವಾಗಿ ಬಳಸಿ ಕೊಳ್ಳುವುದು ಸರಿಯಲ್ಲ. ಅಕ್ರಮ ಗಣಿಗಾರಿಕೆ ವಿಚಾರದ ದನಿ ಎತ್ತಿದಾಗೆಲ್ಲ ದುಡ್ಡು ವಸೂಲಿ ಮಾಡಲು ಯತ್ನಿಸುತ್ತಿರುವ ಆರೋಪ ಮಾಡುವವರು. ಈ ಅಭ್ಯಾಸ ವನ್ನು ಹಿಂದಿನಿಂದಲೂ ಹೊಂದಿರುವು ದಾಗಿ ಯಾರ ಹೆಸರೇಳದೆ ಟೀಕಿಸಿದರು.

ಸಭೆ ವೇಳೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಸಂಕೇತವಾಗಿ ಕಳೆದ ಲೋಕಸಭಾ ಚುನಾವಣೆ ವೇಳೆ ನಿರೀಕ್ಷೆಗೂ ಮೀರಿದ ಜಯ ಸಾಧಿಸಿದ ಸಂಸದೆ ಸುಮ ಲತಾ ಅವರ ಅಕ್ರಮ ಗಣಿಗಾರಿಕೆ ತಡೆ ಹಿನ್ನೆಲೆಯ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಸಾಥ್ ನೀಡುವುದಾಗಿ ಘೋಷಿಸಿದರು. ಮಂಡ್ಯ ಜಿಲ್ಲೆಯ ಶಾಸಕರು ಸಕ್ಕರೆ ಉದ್ಯಮಿ, ಗಣಿ ಸಚಿವ ಮುರುಗೇಶ್ ನಿರಾಣಿ ಜತೆ ಒಳ ಒಪ್ಪಂದ ಮಾಡಿಕೊಂಡಿ ರುವ ಸಂಶಯ ವ್ಯಕ್ತಪಡಿಸಿದ ಅವರು ಕಬ್ಬು ಬೆಳೆಗಾರರು, ಮತ್ತು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಯಾವೊಬ್ಬ ಶಾಸಕರು ದನಿ ಎತ್ತಿಲ್ಲವೆಂದು ಟೀಕಿಸಿದರು.

‘ಮೈಷುಗರ್ ಸಕ್ಕರೆ ಕಾರ್ಖಾನೆ ಬೇಕಿದ್ದ ವರು ಇಟ್ಟುಕೊಳ್ಳಿ, ಗಣಿಗಾರಿಕೆ ವಿಚಾರಕ್ಕೆ ಬರಬೇಡಿರೆಂಬ’ ಆಶಯ ಮಂಡ್ಯ ಜಿಲ್ಲೆಯ ಶಾಸಕರದ್ದಾಗಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅವರ ಶಾಸಕರು ಮುಗಿಬಿದ್ದಿ ರುವುದಾಗಿ ದೂರಿದರು. ಮನ್‍ಮುಲ್ ಆಡಳಿತ ಮಂಡಳಿ ಮಂಡ್ಯ ಜಿಲ್ಲೆಯ ರೈತರ ಹಿತ ಕಡೆಗಣಿಸಿ ಸ್ವಾರ್ಥಕ್ಕೆ ಎಂಬಂತಿದ್ದು ಹಾಲು-ನೀರು ಮಿಶ್ರಿತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಸಂಬಂಧ ರೈತ ಸಂಘದ ನಿಲುವು ಅಚಲವೆಂದರು.
ಪ್ರತಿಭಟನೆ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಯರಗನಹಳ್ಳಿ ರಾಮಕೃಷ್ಣಯ್ಯ, ಜಿಲ್ಲಾಧ್ಯಕ್ಷ ಕೆಂಪುಗೌಡ, ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿಯ ಮಧುಚಂದನ್, ಮೈಸೂರು ರೈತ ಕೂಟದ ಪ್ರಸನ್ನ, ಕೆ.ಆರ್. ರವೀಂದ್ರ, ವಿಎಸ್‍ಎಸ್ ಮುಖಂಡ ಗುರುಪ್ರಸಾದ್ ಮಾತನಾಡಿದರು.