ಹೊರಟ್ಟಿ ಹೇಳಿಕೆಯಂತೆ ಮೈತ್ರಿಯಾಗಬಹುದು

ಮೈಸೂರು,ಡಿ.20(ಎಂಟಿವೈ)-ಬಿಜೆಪಿ-ಜೆಡಿಎಸ್ ಮೈತ್ರಿ ಸಹಜವಾಗಿ ನಡೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೀಡಿರುವ ಹೇಳಿಕೆಯಂತೆ ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಸಖ್ಯ ಮುಂದು ವರೆಸಲೂಬಹುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಆಲೋಚನೆಗಳು ಇಂದಿನ ರಾಜಕೀಯದಲ್ಲಿ ನಡೆಯುವು ದಿಲ್ಲ ಎಂಬ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ.ದೇವೇಗೌಡ ಪಕ್ಷದ ವರಿಷ್ಠರು. ಅವರು ಹೇಳಿದಂತೆಯೇ ಪಕ್ಷದಲ್ಲಿ ನಡೆಯುವುದು. ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಬೇಕಾದರೂ ದೇವೇಗೌಡರೇ ಸಹಿ ಹಾಕಬೇಕು ಎಂದರು. ದೇವೇಗೌಡರ ಆಲೋಚನೆ ರೈತರು ಮತ್ತು ಬಡವರ ಪರವಾಗಿದೆ. ಇದಕ್ಕಾಗಿ ಪಕ್ಷ ಕಟ್ಟಿದ್ದಾರೆ. ಯಾರೇ ಬರಲಿ, ಹೋಗಲಿ, ಹಾಗೂ ವಿರೋಧಿಸಲಿ ಪಕ್ಷ ಉಳಿಯಬೇಕೆಂಬುದು ಅವರ ಗುರಿ. ಇಂದಿಗೂ ಅದೇ ಆಲೋಚನೆಗೆ ಬದ್ಧರಾಗಿದ್ದಾರೆ. ಹೆಚ್.ಡಿ.ದೇವೇಗೌಡರ ಆಲೋಚನೆ ಬದಲಾಗಿಲ್ಲ ಎನ್ನುವುದಾದರೆ ಅಂದು ದೇವೇಗೌಡರನ್ನು ಬಿಟ್ಟು ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಗಲಿಲ್ಲವೇ? ಈಗಲೂ ಹೊಂದಾಣಿಕೆ ಮಾಡಿಕೊಳ್ಳಲಿ ಎಂದರು. ಜೆಡಿಎಸ್ ಆಲೋಚನೆ ಮತ್ತು ಪ್ರಸ್ತುತದ ವಿದ್ಯಾಮಾನ ಗಮನಿಸಿದರೆ ಮೈತ್ರಿ ಸಹಜವಾಗಿ ನಡೆಯುತ್ತದೆ ಎಂಬ ಹೇಳಿಕೆ, ಮುಂದೊಂದು ದಿನ ನಿಜ ಆದರೂ ಆಗಬಹುದು ಎಂದು ಸ್ಪಷ್ಟಪಡಿಸಿದರು.