ಜೈಲು ಸೇರಿದ ಮಾಯಾದೇವಿ ಗಲಗಲಿ

ಮಡಿಕೇರಿ: ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹದಳದಿಂದ ಬಂಧಿಸಲ್ಪಟ್ಟ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಅವರು ತನಗೆ ಕಡಿಮೆ ರಕ್ತದೊತ್ತಡ ಇರುವುದಾಗಿ ಹೇಳಿ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆಯ ಬಳಿಕ ಗುಣಮುಖ ಆಗಿರುವುದನ್ನು ಧೃಡಪಡಿಸಿಕೊಂಡ ಎಸಿಬಿ ಅಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಿ ಪರಾಮರ್ಶೆ ನಡೆಸಿದರು. ಮಾಯಾದೇವಿ ಗಲಗಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದನ್ನು ಖಚಿತಪಡಿಸಿ ಕೊಂಡ ಅಧಿಕಾರಿಗಳ ತಂಡ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿ ಸಿದರು. ಈ ಸಂದರ್ಭ ಎಸಿಬಿ ಉಪ ಅಧೀಕ್ಷಕ ಪೂರ್ಣ ಚಂದ್ರ ತೇಜಸ್ವಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾನು ನಿರಾಪರಾಧಿ: ಜಿಲ್ಲಾಸ್ಪತ್ರೆಯಿಂದ ಹೊರ ಬಂದ ಮಾಯಾ ದೇವಿ ಗಲಗಲಿ ಮಾಧ್ಯಮದವರನ್ನು ಕಂಡೊಡನೆ, ನಾನು ನಿರಾಪರಾಧಿ, ನಾನು ಯಾವುದೇ ತಪ್ಪು ಮಾಡಿಲ್ಲ. ಯಾರಿಂದಲೂ ಹಣ ಪಡೆದಿಲ್ಲ. ಪ್ರಾಮಾಣಿಕ ಅಧಿಕಾರಿಗೆ ಕಿರುಕುಳ ನೀಡಲಾಗಿದೆ ಎಂದು ಹೇಳಿದರು. ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಹೋರಾಡುತ್ತೇನೆ. ದೇವರು ಎಲ್ಲವನ್ನು ನೋಡುತ್ತಿದ್ದು, ಅವನೇ ನ್ಯಾಯ ಕೊಡುತ್ತಾನೆ ಎಂದರು.