ಮೈಸೂರು, ಏ.22(ಎಂಕೆ)- ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಪ್ರತಿನಿತ್ಯ ಸಾವಿರಾರು ಬಡ ಕುಟುಂಬ, ನಿರಾಶ್ರಿತರು, ದತ್ತು ಗ್ರಾಮ, ಕರ್ತವ್ಯ ನಿರತ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಊಟ, ಅಗತ್ಯ ವಸ್ತುಗಳ ಮತ್ತು ಕೊರೊನಾ ರಕ್ಷಣಾ ಕಿಟ್‍ಗಳನ್ನು ವಿತರಣೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿದೆ.
ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಜಾರಿಯಾದಾಗಿನಿಂದ ರಾಮಕೃಷ್ಣ ಆಶ್ರಮ ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದ್ದು, ದಿನ ನಿತ್ಯ ಜನರ ಕಷ್ಟಕ್ಕೆ ನೆರವಾಗುತ್ತಿದೆ. ಸರ್ಕಾರದ ಸೂಚನೆ ಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವಾ ಕಾರ್ಯಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿದೆ.
ಮಾರ್ಚ್ 26ರಿಂದ ಇಲ್ಲಿಯವರೆಗೆ 2500ಕ್ಕೂ ಹೆಚ್ಚು ಕೊರೊನಾ ರಕ್ಷಣಾ ಕಿಟ್(ಎರಡು ಮಾಸ್ಕ್, ಎರಡು ಸಾಬೂನು, ಒಂದು ಬಂಡಲ್ ಟಿಷ್ಯೂ ಪೇಪರ್, ಎರಡು ಪ್ಯಾಕೆಟ್ ಬಿಸ್ಕತ್ತು, 100 ಎಂಎಲ್‍ನ ಒಂದು ಸ್ಯಾನಿಟೈಸರ್ ಬಾಟಲ್ ಮತ್ತು 10 ಮಿಟಮಿನ್ ಮಾತ್ರೆ)ಗಳನ್ನು ತಯಾರಿಸಿ, ಪೊಲೀಸ್, ವೈದ್ಯಕೀಯ ಸಿಬ್ಬಂದಿ, ನಗರಪಾಲಿಕೆ ಪೌರಕಾರ್ಮಿಕರು, ಮಂಜುನಾಥಪುರ ಮತ್ತು ಕುಂಬಾರಕೊಪ್ಪಲಿನಲ್ಲಿ ವಿತರಣೆ ಮಾಡಿ ಕೊರೊನಾ ಜಾಗೃತಿಯನ್ನು ಮೂಡಿಸಲಾಗಿದೆ.
200 ಮಂದಿಗೆ ನಿತ್ಯ ಊಟ: ಆಶ್ರಮದಲ್ಲಿಯೇ ಊಟ ತಯಾರಿಸಿ, ಅಕ್ಷರ ಆಹಾರ ಫೌಂಡೇಷನ್ ಮೂಲಕ ಪ್ರತಿನಿತ್ಯ 200 ಮಂದಿಗೆ ಊಟ ವಿತರಣೆ ಮಾಡಲಾಗುತ್ತಿದೆ. ನಿತ್ಯ ಶುಚಿತ್ವದೊಂದಿಗೆ ಬೇರೆ ಬೇರೆ ಖಾದ್ಯವನ್ನು ಸಿದ್ಧಪಡಿಸಿ, ಹಸಿದವರ ಹಸಿ ವನ್ನೂ ನೀಗಿಸಲಾಗುತ್ತಿದೆ.
ಅಗತ್ಯ ವಸ್ತುಗಳ ವಿಶೇಷ ಕಿಟ್: ಅಕ್ಕಿ, ಗೋಧಿ ಹೊರತುಪಡಿಸಿ, ಅತ್ಯಾವಶ್ಯಕ ಪದಾರ್ಥಗಳಾದ ಎರಡು ಕೆ.ಜಿ ಗೋಧಿ, ಒಂದು ಕೆ.ಜಿ ಬೆಳೆ, ಒಂದು ಕೆ.ಜಿ ಸಕ್ಕರೆ, ಒಂದು ಕೆ.ಜಿ. ಹುರಿಗಡಲೆ, ಒಂದು ಲೀಟರ್ ಅಡುಗೆ ಎಣ್ಣೆ, ಎರಡು ಕೆ.ಜಿ ಬಾಳೆಹಣ್ಣು, ಒಂದು ಕೆ.ಜಿ. ಉಪ್ಪು, ಟೀ ಪುಡಿ ಪ್ಯಾಕೆಟ್, ನಾಲ್ಕು ಸಾಬೂನು, ಅರ್ಧ ಕೆ.ಜಿ ಮೈದಾ ಹಿಟ್ಟು ಮತ್ತು ಬೆಲ್ಲ ಒಳಗೊಂಡ ಕಿಟ್‍ಗಳನ್ನು ನೀಡಲಾಗುತ್ತಿದೆ. ಈಗಾಗಲೇ ನಗರದ ಮೇದರ್ ಬ್ಲಾಕ್, ಬಂಬೂ ಬಜಾರ್ ಸೇರಿದಂತೆ ವಿವಿಧೆಡೆ 500ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಲಾಗಿದ್ದು, ಮತ್ತಷ್ಟು ಕಿಟ್‍ಗಳ ತಯಾರಿಕೆ ನಡೆಯುತ್ತಿದೆ.
ಮನೆ ಬಾಗಿಲಿಗೆ: ಸರ್ಕಾರ ಸೂಚನೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿ ನಲ್ಲಿ ಸ್ವಯಂ ಸೇವಕರಿಂದ ಬಡ ಕುಟುಂಬಗಳ ಮಾಹಿತಿ ಪಡೆದು ಮನೆ ಬಾಗಿಲಿಗೆ ಕಿಟ್‍ಗಳನ್ನು ನೀಡಲಾಗುತ್ತಿದೆ. ಅಲ್ಲದೆ ಈ ವೇಳೆ ಕೊರೊನಾ ಕುರಿತು ಅರಿವು ಮೂಡಿಸುವ ಮಾಹಿತಿಯುಳ್ಳ ಕರ ಪತ್ರಗಳನ್ನು ನೀಡಲಾಗುತ್ತಿದೆ. 20 ಮಂದಿ ಸಾಧುಗಳು, ಸ್ವಯಂ ಸೇವಕರು ಸೇರಿ ರಾಮಕೃಷ್ಣ ಆಶ್ರಮ ಮತ್ತು ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಅಗತ್ಯ ವಸ್ತುಗಳು ಮತ್ತು ಕೊರೊನಾ ರಕ್ಷಣಾ ಕಿಟ್‍ಗಳನ್ನು ತಯಾರಿಸ ಲಾಗುತ್ತಿದ್ದು, ಎಲ್ಲವನ್ನು ವ್ಯವಸ್ಥಿತವಾಗಿ ಸಾರ್ವ ಜನಿಕರಿಗೆ ಪೂರೈಕೆ ಮಾಡಲಾಗುತ್ತಿದೆ.
ದತ್ತು ಗ್ರಾಮದಲ್ಲಿ ವಿತರಣೆ: ಚಾಮರಾಜನಗರ ಜಿಲ್ಲೆಯ ತೆಂಕಲಮೋಳೆ ಗ್ರಾಮವನ್ನು ದತ್ತು ಸ್ವಿಕರಿ ಸಿದ್ದು, ಇಲ್ಲಿಯ 200 ಬಡಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಲಾಗಿದೆ. ಪ್ರತಿ ಕುಟುಂಬಕ್ಕೂ ಸುಮಾರು 10ರಿಂದ 15 ದಿನಗಳಿಗೆ ಆಗುವಷ್ಟು ದಿನಸಿಯನ್ನು ಮನೆ ಮನೆಗೆ ನೀಡಲಾಗಿದೆ.
ಸೇವೆಯೇ ಸಕಲ ಪೂಜೆಗಳ ಸಾರ….
ನಾವು ಪರಿಶುದ್ಧರಾಗಿ, ಪರೋಪಕಾರದಲ್ಲಿ ಸುಖ ಕಾಣುವುದೇ ಸಕಲ ಪೂಜೆಗಳ ಸಾರ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ರಾಮಕೃಷ್ಣ ಆಶ್ರಮ ಕೊರೊನಾ ಸೋಂಕಿನಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಧ್ಯವಾದ ಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾ ನಂದಜೀ ಹೇಳಿದರು. ಜನರ ಕಷ್ಟಕ್ಕೆ ಸ್ಪಂದಿಸುವ ಮನೋಭಾವನೆ ಇರಬೇಕು. ಅರ್ಥ ಮಾಡಿಕೊಂಡು ಕೊಡಬೇಕು. ಯಾಂತ್ರಿಕವಾಗಿ ಕೊಡಬಾರದು. ಇನ್ನೊಬ್ಬರಿಗೆ ಕೊಡುವುದರಲ್ಲಿ ಆನಂದವಿದೆ. ಇನ್ನೊಬ್ಬರ ಸೇವೆ ಮಾಡುತ್ತೇನೆ ಎಂದರೆ ಭಗವಂತನೇ ಶಕ್ತಿಕೊಡುತ್ತಾನೆ ಇದು ಪ್ರಕೃತಿಯ ನಿಯಮ. ಪ್ರಕೃತಿಯಲ್ಲಿ ಸ್ವಾರ್ಥವಿಲ್ಲ. ನಿಸ್ವಾರ್ಥಿ ಯಾದರೆ ಪ್ರಕೃತಿಯ ಶಕ್ತಿ ನಮ್ಮನ್ನು ಕಾಪಾಡುತ್ತದೆ. ಪ್ರಕೃತಿಯನ್ನು ಅರ್ಥಮಾಡಿಕೊಂಡು ನಾವುಗಳೂ ನಿಸ್ವಾರ್ಥ ಜೀವನವನ್ನು ಅವಲಂಬಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವುದೇ ಪುಣ್ಯ, ಕಷ್ಟ ಕೊಡುವುದೇ ಪಾಪ. ಇದೇ ಧರ್ಮದ ಸಾರವಾಗಿದೆ. ಈ ದೇಶದಲ್ಲಿ ಬೇರೆ ಬೇರೆ ಜನಾಂಗದವರಿದ್ದರೂ ಎಲ್ಲರನ್ನು ಸಾಕುವ ತಾಯಿಯ ಗುಣ ಈ ಮಣ್ಣಿಗಿದೆ. ದೇಶದ ಸಂಸ್ಕøತಿಯಲ್ಲಿ ಪರಹಿತದ ಶಕ್ತಿಯಿರುವುದ ರಿಂದಲೇ ಕೊರೊನಾ ನಿಯಂತ್ರಣ ಅದಷ್ಟೂ ಸಾಧ್ಯವಾಗಿದೆ. ಕೊರೊನಾ ಸೋಂಕಿನಿಂದ ದೇಶ ಮುಕ್ತವಾಗಿ ಆರೋಗ್ಯ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ನಮ್ಮೆಲ್ಲರ ಆಶಾಭಾವನೆಯಾಗಿದೆ ಎಂದರು. ಲಾಕ್‍ಡೌನ್ ಮುಗಿಯುವವರೆಗೂ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಸಹಕಾರ ನೀಡಲಾಗುವುದು. ಇದೊಂದು ಮನುಕುಲಕ್ಕೆ ಬಂದ ಅಪಾಯ. ಆದ್ದರಿಂದ ಎಚ್ಚರಿಕೆಯಿಂದ ಜೀವನ ನಡೆಸಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನೀಡಿದ ಸಲಹೆ-ಸೂಚನೆಯನ್ನು ತಪ್ಪದೆ ಎಲ್ಲರೂ ಪಾಲಿಸಬೇಕು ಎಂದು ಮನವಿ ಮಾಡಿದರು.