ಉಕ್ರೇನ್‌ನಿಂದ ವಾಪಸ್ಸಾದ ಮೆಡಿಕಲ್ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಮೆಡಿಕಲ್ ಕಾಲೇಜಲ್ಲಿ ಬ್ರಿಡ್ಜ್ ಕೋರ್ಸಿಗೆ ಪ್ರವೇಶಾವಕಾಶ

೨ ದಿನದಲ್ಲಿ ೫೧೧ ವಿದ್ಯಾರ್ಥಿಗಳು ದಾಖಲು: ಸುತ್ತೂರು ಶ್ರೀ
ಇವರಲ್ಲಿ ಶೇ.೭೦ರಷ್ಟು ಕರ್ನಾಟಕದ ವಿದ್ಯಾರ್ಥಿಗಳೇ ಇದ್ದಾರೆ

ಮೈಸೂರು,ಮೇ೨(ಆರ್‌ಕೆಬಿ)- ಯುದ್ಧ ನಿರತ ಉಕ್ರೇನ್, ರಷ್ಯಾ ಅಲ್ಲದೆ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ವಾಪಸ್ ಬಂದಿರುವ ದೇಶದ ವಿದ್ಯಾರ್ಥಿ ಗಳು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಶಿವರಾತ್ರಿ ಉನ್ನತ ಶಿಕ್ಷಣ ಅಕಾಡೆಮಿ ಆರಂಭಿಸಿರುವ ಸೇತುಬಂಧ (ಬ್ರಿಡ್ಜ್) ಕೋರ್ಸಿಗೆ ಸೇರ್ಪಡೆಯಾಗಿದ್ದಾರೆ. ಈ ಕೋರ್ಸ್ಗೆ ಎರಡು ದಿನದಲ್ಲಿ ೫೧೧ ವಿದ್ಯಾರ್ಥಿ ಗಳು ಪ್ರವೇಶಾತಿ ಪಡೆದಿದ್ದು, ಅವರಲ್ಲಿ ೩೨೧ ವಿದ್ಯಾರ್ಥಿಗಳು ಕರ್ನಾಟಕದವರೇ ಆಗಿದ್ದಾರೆ.

ವಿದ್ಯಾಭ್ಯಾಸ ಮುಂದುವರಿಸಲಾಗದೇ ಕಂಗಾಲಾಗಿದ್ದ ವಿದ್ಯಾರ್ಥಿಗಳ ನೆರವಿಗೆ ಇದೀಗ ಮೈಸೂರಿನ ಸುತ್ತೂರು ಮಠ ಧಾವಿಸಿದೆ. ಉಕ್ರೇನ್‌ನಿಂದ ವಾಪಸ್ಸಾಗಿ ರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲು ಸುತ್ತೂರು ಮಠ ಅವಕಾಶ ಕಲ್ಪಿಸಿದೆ. ಘೋಷಿಸಿದ್ದು ೫೦೦ ಸೀಟ್‌ಗಳು. ಆದರೆ ಇನ್ನೂ ೧೧ ಹೆಚ್ಚುವರಿ ಸೀಟ್‌ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉಕ್ರೇನ್, ರಷ್ಯಾ ನಡುವಿನ ಯುದ್ಧ ದಿಂದಾಗಿ ಅರ್ಧಕ್ಕೆ
ವಿದ್ಯಾಭ್ಯಾಸ ಬಿಟ್ಟು, ಸ್ವದೇಶಕ್ಕೆ ವಾಪಸ್ಸಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆAದು ಆರಂಭಿಸಿರುವ ಸೇತುಬಂಧ ಕೋರ್ಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಕಟಣೆ ಹೊರ ಬೀಳುತ್ತಿದ್ದಂತೆ ವಿದ್ಯಾರ್ಥಿಗಳು ಕೋರ್ಸ್ ಸೇರ್ಪಡೆಗೆ ಭಾರೀ ಆಸಕ್ತಿ ತೋರುತ್ತಿದ್ದಾರೆ. ದಾಖಲಾದ ವಿದ್ಯಾರ್ಥಿಗಳಿಗೆ ಅವರು ಯಾವ ಸೆಮಿಸ್ಟರ್ ಅಥವಾ ವರ್ಷದ ವೈದ್ಯಕೀನ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರೋ ಅದರ ಆಧಾರದ ಮೇಲೆ ತರಬೇತಿ ನೀಡಲಾಗುತ್ತದೆ ಎಂದರು.

ಈ ಕೋರ್ಸ್ನಲ್ಲಿ ಪ್ರಾಯೋಗಿಕ ಹಾಗೂ ಭೌತಿಕ ತರಗತಿ ನಡೆಸಲಾಗುವುದು. ಕ್ಲಿನಿಕಲ್ ಅಧ್ಯಯನಕ್ಕೂ ಅವಕಾಶ ನೀಡಲಾಗುವುದು. ಆದರೆ, ರೋಗಿಗೆ ಚಿಕಿತ್ಸೆ ನೀಡುವ, ಶಸ್ತçಚಿಕಿತ್ಸೆ ಮಾಡುವ ಅವಕಾಶ ಇರುವುದಿಲ್ಲ. ಸ್ಥಳದಲ್ಲಿ ಇದ್ದು ಪ್ರಕ್ರಿಯೆಗಳನ್ನು ವೀಕ್ಷಿಸಬಹುದಷ್ಟೇ. ಕೋರ್ಸ್ ಸಂಪೂರ್ಣ ಉಚಿತವಾಗಿದೆ. ಆದರೆ, ಊಟ ಮತ್ತು ವಸತಿ ಸೌಕರ್ಯವನ್ನು ವಿದ್ಯಾರ್ಥಿಗಳೇ ಮಾಡಿಕೊಳ್ಳಬೇಕು. ತರಬೇತಿ ಕುರಿತು ಪ್ರಮಾಣಪತ್ರ ನೀಡುವುದಿಲ್ಲ. ಬೇಕೇ ಬೇಕು ಎನ್ನುವವರಿಗೆ ಮಾತ್ರ ಪ್ರಮಾಣಪತ್ರ ನೀಡಲಾಗುವುದು. ಈ ಪತ್ರವನ್ನು ಪರಿಗಣ ಸುವುದು, ಬಿಡುವುದು ಆಯಾ ವಿಶ್ವ ವಿದ್ಯಾನಿಲಯಗಳಿಗೆ ಬಿಟ್ಟ ವಿಚಾರ ಎಂದರು.

ಜೆಎಸ್‌ಎಸ್ ತಾಂತ್ರಿಕ ಮತ್ತು ವಿಜ್ಞಾನ ಕಾಲೇಜಿನ ಕುಲಸಚಿವ ಡಾ.ಬಿ.ಸುರೇಶ್ ಮಾತನಾಡಿ, ವಿದೇಶದ ಕೆಲವೊಂದು ವಿಶ್ವ ವಿದ್ಯಾಲಯಗಳು ಆನ್‌ಲೈನ್ ಮೂಲಕ ಪಾಠ ಮಾಡುತ್ತಿವೆ. ಆದರೆ, ವೈದ್ಯಕೀಯ ಶಿಕ್ಷಣದಲ್ಲಿ ಪ್ರಾಯೋಗಿಕತೆಗೆ ಹೆಚ್ಚಿನ ಆದ್ಯತೆ ಇರುವುದ ರಿಂದ ಸೇತುಬಂಧ ಕೋರ್ಸ್ ಆರಂಭಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ನೀಡಲಾಗುವುದು. ಪ್ರತ್ಯೇಕ ತರಗತಿ ನಡೆಸಲಾಗುವುದು. ಇದು ನಮಗೆ ದೊಡ್ಡ ಸವಾಲಿನ ಜೊತೆಗೆ ಕಷ್ಟದ ಕೆಲಸವೂ ಆಗಿದೆ. ಆದರೂ ನಾವು ಹೆಚ್ಚಿನ ಜವಾಬ್ದಾರಿಯಿಂದ ಈ ಸೌಲಭ್ಯ ಕಲ್ಪಿಸುತ್ತೇವೆ. ನಮ್ಮ ದೇಶದಲ್ಲೇ ಅವರು ಶಿಕ್ಷಣ ಮುಂದುವರಿಸುವ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ ಡಾ.ಸುರೇಂದ್ರ ಸಿಂಗ್, ಜೆಎಸ್‌ಎಸ್ ಎಎಚ್‌ಇಆರ್ ಕುಲಸಚಿವ ಡಾ.ಬಿ. ಮಂಜುನಾಥ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವನಗೌಡಪ್ಪ, ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಡಿ.ಸುನೀಲ್‌ಕುಮಾರ್ ಉಪಸ್ಥಿತರಿದ್ದರು.

ಸೇತುಬಂಧ ಕೋರ್ಸ್ಗೆ  ಸೇರ ಬಯಸುವವರು ೬೩೬೬೩ ೬೬೬೬೩ ಸಂಪರ್ಕಿಸಬಹುದು