ಶಾಸಕರ ಬೇಡಿಕೆಗಳಿಗೆಲ್ಲಾ ಸಚಿವ ಸೋಮಣ್ಣ ಅಸ್ತು

ಮೈಸೂರು,ಜ.24(ಆರ್‍ಕೆ)- ಸೋಮ ವಾರ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರುಗಳ ಎಲ್ಲಾ ಬೇಡಿಕೆಗಳಿಗೂ ಸಚಿವ ವಿ. ಸೋಮಶೇಖರ್ ಅಸ್ತು ಎಂದರು. ನಿಮ್ಮ ಎಲ್ಲಾ ಕೆಲಸಗಳನ್ನೂ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ಮನೆ ಮಂಜೂರಾಗಿದ್ದ ಫಲಾನುಭವಿಗಳ ಹಂಚಿಕೆ ರದ್ದಾಗಿದ್ದು, ಲಾಗಿನ್ ಲಾಕ್ ಆಗಿದೆ, ಸಹಾಯ ಧನವೂ ಸಿಕ್ಕಿಲ್ಲ, ಸ್ಲಂ ಬೋರ್ಡ್‍ನಿಂದ ಅಲಾಟ್ ಆಗಿರುವ ವಸತಿ ಪ್ರದೇಶಗಳಲ್ಲಿ ಮೂಲ ಸೌಕರ್ಯವಿಲ್ಲ, ಅವುಗಳನ್ನು ನಿರ್ವಹಿ ಸಲು ಪಾಲಿಕೆಗೆ ಜವಾಬ್ದಾರಿ ಕೊಡಿ ಎಂದು ಶಾಸಕ ತನ್ವೀರ್ ಸೇಠ್ ಕೇಳಿಕೊಂಡರು.

ತಮ್ಮ ಕ್ಷೇತ್ರದಲ್ಲಿ ನಿರ್ಮಿಸಿರುವ ಮನೆ ಗಳ 2,982 ಫಲಾನುಭವಿಗಳಿಗೆ ಸಹಾಯ ಧನ ಬಂದಿಲ್ಲ, ಸ್ಲಂಬೋರ್ಡ್‍ನಿಂದ ಪ್ರಸ್ತಾ ವನೆ ಸಲ್ಲಿಸಲಾಗಿದೆ. ಮೂಲಸೌಲಭ್ಯ ಗಳಿಗೂ ಅನುದಾನ ಬೇಕಾಗಿದೆ ಎಂದು ಎಸ್.ಎ. ರಾಮದಾಸ್ ಹೇಳಿದರು.

ಚಾಮರಾಜ ಕ್ಷೇತ್ರದಲ್ಲಿ 21 ಸ್ಲಂಗಳು ಘೋಷಣೆಯಾಗಿವೆ. ಅಲ್ಲಿನ ನಿವಾಸಿಗಳಿಗೆ ಮನೆ ಕಟ್ಟಿಸಬೇಕು, ಅನುದಾನ ಕೊಡಿಸಿ ಹಾಗೂ ಈ ಹಿಂದೆ ಅಯ್ಯಾಜಯ್ಯನ ಹುಂಡಿ ಯಲ್ಲಿ 10 ಎಕರೆ ಜಾಗವನ್ನು ಆಶ್ರಯ ಬಡಾ ವಣೆಗಾಗಿ ಗುರ್ತಿಸಲಾಗಿತ್ತು. ಶಾಸಕರಾಗಿದ್ದ ಹೆಚ್.ಎಸ್.ಶಂಕರಲಿಂಗೇಗೌಡರು 475 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನವನ್ನೂ ಹಂಚಿದ್ದರು. ಯಾರೋ ಕೋರ್ಟ್‍ಗೆ ಹೋಗಿದ್ದರಿಂದ ಗುರ್ತಿಸಿದ್ದ ಜಾಗ ಸರ್ಕಾರಿ ಕೆರೆಯಾದ್ದರಿಂದ ಯೋಜನೆ 2000ನೇ ವರ್ಷದಿಂದ ಅನುಷ್ಠಾನಗೊಂ ಡಿಲ್ಲ, ಅದಕ್ಕೆ ಪ್ರತಿಯಾಗಿ ಬೇರೆಡೆ ಜಾಗ ಕೊಟ್ಟು ಸಮಸ್ಯೆ ಪರಿಹರಿಸಿ ಎಂದು ಶಾಸಕ ಎಲ್.ನಾಗೇಂದ್ರ ಕೇಳಿಕೊಂಡರು.

ಕಬಿನಿ ಜಲಾಶಯದಿಂದ ಮುಳುಗಡೆ ಯಾಗಿದ್ದ ಮನೆಗಳ 43 ಕುಟುಂಬಗಳಿಗೆ ಇನ್ನೂ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ, ಬೇರೆಡೆ ಜಾಗ ಕೊಡಿಸಿ, ಸರಗೂರು ಮತ್ತು ಹೆಚ್.ಡಿ. ಕೋಟೆ ತಾಲೂಕಿನ ನಿರಾಶ್ರಿತರು, ಹಾಡಿ ಜನರಿಗೆ 500 ಮನೆಗಳನ್ನು ಕೊಡಬೇಕು ಎಂದು ಅನಿಲ್ ಚಿಕ್ಕಮಾದು ಬೇಡಿಕೆ ಇಟ್ಟರು.
ಅದೇ ರೀತಿ ತಿ.ನರಸೀಪುರ, ಬನ್ನೂರು ಭಾಗಗಳಲ್ಲಿ ಮಂಜೂರಾಗಿದ್ದ ಮನೆಗಳಲ್ಲಿ ಕೆಲವು ನೈಜ ಫಲಾನುಭವಿಗಳ ಹಂಚಿಕೆ ರದ್ದಾಗಿವೆ. ಇನ್ನೂ ಹಲವರು ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಶಾಸಕ ಅಶ್ವಿನಿ ಕುಮಾರ್ ಹೇಳಿದರೆ, ವಸತಿ ಯೋಜನೆ ಗಳ ಸಂಬಂಧ ಉಂಟಾಗಿರುವ ಸಮಸ್ಯೆ ಇತ್ಯರ್ಥಪಡಿಸಿ ನಿರಾಶ್ರಿತರಿಗೆ ಮನೆ ಕಟಿಸಿಕೊಡಬೇಕೆಂದು ಶಾಸಕರಾದ ಬಿ. ಹರ್ಷವರ್ಧನ್ ಹಾಗೂ ಹೆಚ್.ಪಿ. ಮಂಜುನಾಥ್ ಕೇಳಿಕೊಂಡರು.

ಮನೆ ಹಂಚಿಕೆಯಲ್ಲಿ ಕೇವಲ ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳ ನಿರ್ಧಾರವೇ ಅಂತಿಮವೋ ಅಥವಾ ಶಾಸಕರ ತೀರ್ಮಾನವೋ ಎಂಬ ಗೊಂದಲ ವನ್ನು ಸ್ಪಷ್ಟಪಡಿಸಿ ಎಂದ ವಿಧಾನಪರಿ ಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಗ್ರಾಮೀಣ ಪ್ರದೇಶದ ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ಸಾಮಾನ್ಯ ವರ್ಗ ಮತ್ತು ಎಸ್‍ಸಿ, ಎಸ್ಟಿ ಸಮುದಾಯದವರಿಗೆ ತಾರ ತಮ್ಯ ಹೋಗಲಾಡಿಸಿ ಎಂದು ಮನವಿ ಮಾಡಿದರು. ಶಾಸಕರು ಕೇಳಿದ ಎಲ್ಲಾ ಬೇಡಿಕೆಗಳಿಗೂ ಸ್ಥಳದಲ್ಲೇ ಒಪ್ಪಿಗೆ ನೀಡಿದ ಸಚಿವ ಸೋಮಶೇಖರ್, ಎಲ್ಲ ಸಮಸ್ಯೆ ಪರಿ ಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ, ಅನುದಾನ, ಮನೆಗಳನ್ನೂ ಮಂಜೂರು ಮಾಡುವಂತೆಯೂ ತಿಳಿಸಿದರು.

ಚಾಮರಾಜ ಕ್ಷೇತ್ರದ ಆಶ್ರಯ ಫಲಾ ನುಭವಿಗಳಿಗೆ ಪರ್ಯಾಯ ಜಾಗದ ವಿಷಯಕ್ಕೆ ಮಾತ್ರ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ನಗರ ಪಾಲಿಕೆ ಆಯುಕ್ತರಿಗೆ ಸಚಿವ ಸೋಮಣ್ಣ ಸೂಚನೆ ನೀಡಿದರು. ಹಾಗೆಯೇ ಸಂಸದ ರೊಂದಿಗೂ ಮಾತನಾಡಿ ಪರ್ಯಾಯ ಜಾಗ ಹುಡುಕಿಸುವಂತೆ ಶಾಸಕ ನಾಗೇಂದ್ರ ಅವರಿಗೂ ಸಲಹೆ ನೀಡಿದರು.