ಮಂಡ್ಯ ಜಿಲ್ಲೆಯಲ್ಲಿ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಮಂಡ್ಯ, ಸೆ.27(ಮೋಹನ್ ರಾಜ್)- ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದು ಹಾಗೂ ಬೆಲೆ ಏರಿಕೆ ವಿರುದ್ಧ ವಿವಿಧ ರೈತ, ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಮಂಡ್ಯ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಂಡ್ಯ ನಗರ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ಪಟ್ಟಣಗಳಲ್ಲೂ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸೋಮವಾರ ಬೆಳಗ್ಗೆಯಿಂ ದಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾ ಗಿತ್ತು. 10 ಗಂಟೆಯ ನಂತರ ಎಂದಿನಂತೆ ಪೇಟೆಬೀದಿ, ವಿವಿ ರಸ್ತೆ, ನೂರಡಿ ರಸ್ತೆ, ವಿವೇಕಾ ನಂದ ರಸ್ತೆ, ಆರ್‍ಪಿ ರಸ್ತೆ, ವಿನೋಬಾ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿಯ ಅಂಗಡಿ-ಮುಂಗಟ್ಟುಗಳು ತೆರೆದವು. ಹೋಟೆಲ್, ದಿನಸಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ಅಂಗಡಿ ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ನಗರದಲ್ಲಿ ಬಂದ್ ಯಾವುದೇ ರೀತಿಯ ಪರಿ ಣಾಮ ಬೀರಲಿಲ್ಲ. ಸಾರಿಗೆ ಬಸ್‍ಗಳು ಸೇರಿದಂತೆ ಖಾಸಗಿ, ಆಟೋ, ಕಾರು, ಬೈಕ್‍ಗಳು ಎಂದಿನಂತೆ ಸಂಚರಿಸಿದವು. ಪ್ರಯಾಣಿಕರಿಗೂ ಯಾವುದೇ ರೀತಿಯ ಬಂದ್ ಬಿಸಿ ತಟ್ಟಲಿಲ್ಲ. ಆದರೂ ಬಂದ್ ಇದ್ದ ಪರಿಣಾಮ ಬಸ್ ನಿಲ್ದಾಣದಲ್ಲಿ ಪ್ರಯಾ ಣಿಕರ ಸಂಖ್ಯೆ ಕಡಿಮೆ ಇತ್ತು.

ಪ್ರತಿನಿತ್ಯದಂತೆ ಸೋಮವಾರವೂ ಸಾರ್ವ ಜನಿಕರ ಓಡಾಟ ಸಹಜವಾಗಿತ್ತು. ನೌಕರರು, ಕಾರ್ಮಿಕರು, ವರ್ತಕರು, ಗ್ರಾಹಕರು ಎಂದಿನಂತೆ ವ್ಯಾಪಾರ-ವಹಿವಾಟಿನಲ್ಲಿ ತೊಡಗಿಕೊಂಡಿದ್ದ ದೃಶ್ಯ ಕಂಡು ಬಂದಿತು. ಅಲ್ಲದೆ, ಮಾರುಕಟ್ಟೆ, ಎಪಿಎಂಸಿ, ಹೊಸಹಳ್ಳಿ ವೃತ್ತ, ಮಹಾವೀರ ವೃತ್ತ, ಗುತ್ತಲು ರಸ್ತೆಗಳ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ನಡೆದವು.

ರೈತಸಂಘ ಹಾಗೂ ಇತರೆ ಕಾರ್ಮಿಕ ಸಂಘ ಟನೆಗಳು ನಗರದಲ್ಲಿ ಪ್ರತಿಭಟನೆ, ಮೆರವಣಿಗೆ, ಬೈಕ್ ರ್ಯಾಲಿ ನಡೆಸಿದರು. ರೈತಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೈಕ್ ರ್ಯಾಲಿ ನಡೆಸಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚುವಂತೆ ಮಾಲೀಕರಿಗೆ ಒತ್ತಾಯ ಹಾಗೂ ಮನವಿ ಮಾಡಿದರು. ಕೆಲವರು ಬಂದ್ ಮಾಡಿದರೆ, ಕೆಲವರು ಬಾಗಿಲು ತೆರೆದಿ ದ್ದರು. ಇದರಿಂದ ಕೆಲವು ಕಡೆ ಅಂಗಡಿ ಮಾಲೀಕರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕ ಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮಹಿಳಾ ಕಾರ್ಯಕರ್ತರು ನಗರದಲ್ಲಿ ತಮಟೆ ಚಳವಳಿ ನಡೆಸಿದರು. ಮಹಿಳಾ ಕಾರ್ಯಕರ್ತರು ತಮಟೆ ಹಾಗೂ ಡೋಲು ಬಾರಿಸುತ್ತಾ ಪ್ರತಿ ಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳು ನಗರದಲ್ಲಿ ರೈತರು ಬೈಕ್ ರ್ಯಾಲಿ ನಡೆಸಿದರು. ನಗರದ ಜಯಚಾಮರಾಜೇಂದ್ರ ವೃತ್ತ, ಬೆಂಗಳೂರು-ಮೈಸೂರು ಹೆದ್ದಾರಿ, ಬನ್ನೂರು ರಸ್ತೆ, ನೂರಡಿ ರಸ್ತೆ, ಗುತ್ತಲು ರಸ್ತೆಗಳಲ್ಲಿ ಸಂಚರಿಸಿ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು.

ಬಂದ್ ಇದ್ದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಜಯಚಾಮರಾಜೇಂದ್ರ ವೃತ್ತ, ನೂರಡಿ ರಸ್ತೆ, ಗುತ್ತಲು ರಸ್ತೆ, ಪೇಟೆಬೀದಿ, ಹೊಳಲು ವೃತ್ತ, ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಕಟ್ಟೆಚ್ಚರ ವಹಿಸಲಾಗಿತ್ತು.

ನಗರದಲ್ಲಿ ಬಂದ್ ಬೆಂಬಲಿಸಿ ವಿವಿಧ ಸಂಘಟನೆ ಗಳ ಕಾರ್ಯಕರ್ತರು ಪ್ರತಿಭಟನೆ, ರ್ಯಾಲಿ, ಬೈಕ್ ರ್ಯಾಲಿ, ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಸಂಚಾರ ದಲ್ಲಿ ವ್ಯತ್ಯಯ ಕಂಡು ಬಂದಿತು. ಸೋಮವಾರ ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ರಸ್ತೆಗಿಳಿದಿದ್ದ ರಿಂದ ಬೆಂಗಳೂರು-ಮೈಸೂರು ಸಂಚರಿಸುತ್ತಿದ್ದ ವಾಹನ ಸವಾರರು, ಪ್ರಯಾಣಿಕರು ತೊಂದರೆ ಅನು ಭವಿಸುವಂತಾಗಿತ್ತು. ಸುಮಾರು ಮಧ್ಯಾಹ್ನದವ ರೆಗೂ ಸಂಚಾರಕ್ಕೆ ಅಡಚಣೆಯಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.