ಕುವೆಂಪು ಜನ್ಮದಿನಾಚರಣೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಖಂಡಿಸಿದ ಎಂಎಲ್‍ಸಿ ವಿಶ್ವನಾಥ್

ಮೈಸೂರು,ಡಿ.29(ಪಿಎಂ)-ಕುವೆಂಪು ಜನ್ಮ ದಿನಾಚರಣೆಯ ಈ ವೇದಿಕೆ ಮೂಲಕ ಮತಾಂತರ ನಿಷೇಧ ಕಾಯ್ದೆ ಖಂಡಿಸುವುದಾಗಿ ತಿಳಿಸಿದ ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಸಮಸ್ತರನ್ನೂ ಸಮಭಾವದಿಂದ ನೋಡುತ್ತೇವೆ ಎನ್ನುವ ಮಠ ಮಾನ್ಯಗಳ ಧರ್ಮಾಧಿಕಾರಿಗಳೇ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಸೊಲ್ಲು ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ವಿವಿ ಮಾನಸ ಗಂಗೋತ್ರಿಯ ಮುಖ್ಯ ದ್ವಾರದ ಕುವೆಂಪು ಪ್ರತಿಮೆ ಬಳಿ ವಿವಿಯ ಸಂಶೋ ಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ರಸಋಷಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನೋ ತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶತಶತಮಾನಗಳಿಂದ ಅಪಮಾನ, ಶೋಷಣೆಗೆ ಒಳಗಾಗಿದ್ದ ಸಮುದಾಯಗಳನ್ನು ಒಗ್ಗೂಡಿಸಿ ಬಸವಣ್ಣನವರು ಸ್ಥಾಪಿಸಿದ ಮಾನವಧರ್ಮವೇ ವೀರಶೈವ ಧರ್ಮ. ಇಂದಿಗೂ ಬಸವಣ್ಣನವರ ಸಂದೇಶ ಅರಿತುಕೊಳ್ಳುವಲ್ಲಿ ನಾವು ವಿಫಲವಾಗಿ ದ್ದೇವೆ. ನಮ್ಮಲ್ಲಿ ಮಠಾಧೀಪತಿಗಳು, ಧರ್ಮಾಧಿಕಾರಿ ಗಳು ಸಾಕಷ್ಟು ಮಂದಿ ಇದ್ದರೂ ಸಮಾಜಕ್ಕೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಇವರ್ಯಾರೂ ಬಾಯಿ ಬಿಚ್ಚದೇ ಇರುವುದೇಕೆ? ಎಂದು ಪ್ರಶ್ನಿಸಿದರು.

ಅಹಿಂದ ಸ್ವಾಮಿಗಳೂ ಮಾತನಾಡುತ್ತಿಲ್ಲ. ನನ್ನಂತ ವರು ಮಾತನಾಡಿದರೆ ಹುಚ್ಚ ಎನ್ನುತ್ತಾರೆ. ಮತಾಂತ ರಗೊಂಡ ಡಾ.ಅಂಬೇಡ್ಕರ್, ಬಸವಣ್ಣನವರನ್ನು ಈ ಕಾಯ್ದೆಯಡಿ ಜೈಲಿಗೆ ಹಾಕಲಾಗುತ್ತದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರಲ್ಲದೆ, ಇಂತಹ ವಿಚಾರಗಳ ಬಗ್ಗೆ ಯುವ ಜನತೆ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದ ಅವರು, ಸಂವಿಧಾನ ಪ್ರತಿಯೊಬ್ಬರಿಗೂ ಯಾವುದೇ ಧರ್ಮ ವನ್ನು ಸ್ವೀಕರಿಸುವ ಹಕ್ಕು ಕೊಟ್ಟಿದೆ. ಅದನ್ನು ತಿರಸ್ಕರಿಸುವ ಹಕ್ಕನ್ನು ಜನಪ್ರತಿನಿಧಿಗಳಿಗೆ ಕೊಟ್ಟವರು ಯಾರು? ಎಂದು ಕಿಡಿಕಾರಿದರು.

ಜಾತಿಗೊಂದು, ಧರ್ಮಕ್ಕೊಂದು ಮಠ ಸ್ಥಾಪನೆ ಮಾಡಿಕೊಂಡಿದ್ದೇವೆ. ಎಲ್ಲಾ ಮಠಾಧೀಶರು, ಧರ್ಮಾಧಿ ಕಾರಿಗಳು ಈ ಕಾಯ್ದೆ ವಿರುದ್ಧ ಮಾತನಾಡಬೇಕು. ಕ್ರಿಶ್ಚಿಯನ್ನರ ದೇಶವಾದ ಅಮೆರಿಕಗೆ ನಮ್ಮ ಮಕ್ಕಳು ಹೋಗಿ ಉನ್ನತ ಹುದ್ದೆ ಅಲಂಕರಿಸಬೇಕೆಂಬ ಆಸೆಯನ್ನು ನಮ್ಮವರು ಹೊಂದಿದ್ದಾರೆ. ಹೀಗಿರು ವಾಗ ಭಾರತದಲ್ಲಿ ಕ್ರಿಶ್ಚಿಯನ್ನರನ್ನು ತೆಗೆಳುವುದು ಸರಿಯೇ? ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರು ಕ್ರಿಶ್ಚಿಯನ್ನರು ಬಹುಸಂಖ್ಯಾತರಿರುವ ಬೇರೆ ಬೇರೆ ದೇಶದಲ್ಲಿ ನೆಲೆಸಿದ್ದಾರೆ. ಹಾಗಾದರೆ ಅವರನ್ನೆಲ್ಲಾ ವಾಪಸ್ಸು ಕರೆಸಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದರು. ಗಲ್ಫ್ ದೇಶಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರು ಇದ್ದಾರೆ. ಅಲ್ಲಿ ಬಹು ಸಂಖ್ಯಾತರಾದ ಮುಸ್ಲಿಮರ ನಡುವೆ ನಮ್ಮವರು ಹೋಗಿ ಪ್ರತಿಷ್ಠಿತ ಜೀವನ ಮಾಡಬೇಕು. ಆದರೆ ಇಲ್ಲಿರುವ ಮುಸ್ಲಿಮರ ಬಗ್ಗೆ ತಾತ್ಸಾರ ಮಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಮುದಾಯ ಕೇವಲ ಪುಸ್ತಕಕ್ಕೆ ಸೀಮಿತ ವಾಗದೇ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಮೇಲೂ ಗಮನ ಹರಿಸಬೇಕು. ಆ ಮೂಲಕ ನಮ್ಮ ಜವಾಬ್ದಾರಿ ಏನು? ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು. ಕುವೆಂಪು ಅವರು ವಾಸ್ತವದ ನೆಲೆಗಟ್ಟಿನಲ್ಲಿ ಜಾಗೃತಿ ಮೂಡಿಸಿದರು. ಭಾರತ ಮತ್ತು ಕರ್ನಾಟಕದ ಅಸ್ಮಿತೆಯನ್ನು ಗೀತೆಯ ಮೂಲಕ ಕಟ್ಟಿಕೊಟ್ಟರು. ಆದರೆ, ರಾಜಕಾರಣಿಗಳಾದ ನಾವು ಸಂಕುಚಿತ ಆಗುತ್ತಿದ್ದೇವೆ. ಜ್ಞಾನವಿದ್ದೂ ಅಜ್ಞಾನಿಗಳಂತೆ ವರ್ತಿಸುತ್ತಿದ್ದೇವೆ ಎಂದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥ ಸ್ವಾಮೀಜಿ, ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ, ಕ್ರೈಸ್ತ ಧರ್ಮಗುರು ಬಿಷಪ್ ರೆ.ಫಾದರ್ ವಿಲಿಯಂ, ಬೌದ್ಧ ಬಿಕ್ಕು ಆಯುಷ್ಮಾನ್ ಶ್ರೀ ಭಂತೆತಿಸ್ಸ, ಸೂಫಿ ಸಂತ ರುಹುಲ್ಲ ಶಾಖಾದ್ರಿ ಸಾನ್ನಿಧ್ಯ ವಹಿಸಿ ದ್ದರು. ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಮೈಸೂರು ವಿವಿ ಕುಲಪತಿಗಳ ವಿಶೇಷಾಧಿಕಾರಿ ಡಾ.ಹೆಚ್.ಕೆ. ಚೇತನ್, ಸಂಶೋಧಕರ ಸಂಘದ ಅಧ್ಯಕ್ಷ ಮಹೇಶ್ ಸೋಸಲೆ ಮತ್ತಿತರರು ಹಾಜರಿದ್ದರು.