ಚಿತ್ರ ಸಾಹಿತಿ ಎಂ.ಎನ್.ವ್ಯಾಸರಾವ್‍ರಿಗೆ ನುಡಿ ನಮನ

ಮೈಸೂರು: ಇತ್ತೀಚೆಗೆ ನಿಧನರಾದ ಕನ್ನಡದ ಜನಪ್ರಿಯ ಚಲನಚಿತ್ರ ಸಾಹಿತಿ ಎಂ.ಎನ್.ವ್ಯಾಸರಾವ್ ಅವರಿಗೆ `ನುಡಿ ನಮನ’ ಕಾರ್ಯಕ್ರಮ ಸೋಮವಾರ ಮೈಸೂರಿನ ಅಗ್ರಹಾರದ ಅಕ್ಕನ ಬಳಗ ಶಾಲೆಯಲ್ಲಿ ನಡೆಯಿತು.

ಕೆಎಂಪಿಕೆ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎನ್.ವ್ಯಾಸರಾವ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ಗುರ್ತಿಸಿಕೊಳ್ಳಲು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಎಂ.ಎನ್.ವ್ಯಾಸರಾವ್ ರಚಿಸಿದ `ಸೂರ್ಯಂಗು, ಚಂದ್ರಂಗೂ ಬಂದಾರೆ ಮುನಿಸು.. ಅರಮನೇಲಿ ಏನೈತೆ ಸೊಗಸು…’ ಗೀತೆ ಇಂದಿಗೂ ಜನಪ್ರಿಯವಾಗಿದೆ. ಅವರ ಪ್ರತಿಯೊಂದು ಹಾಡುಗಳಲ್ಲಿಯೂ ಮನಸ್ಸುಗಳ ಬಾಂಧವ್ಯ ಗಟ್ಟಿಗೊಳಿಸುವ ಗುಣವಿತ್ತು ಎಂದರು.

ಅವರ ಹಲವಾರು ಕಥಾ ಸಂಕಲನಗಳು ತೆಲುಗು, ಹಿಂದಿ, ಬಂಗಾಳಿ, ಸಿಂಧಿ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಭಾಷಾಂತರಗೊಂಡು ಕನ್ನಡ ಸಾಹಿತ್ಯದ ಶಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಮುಖಂಡ ಕೆ.ರಘುರಾಂ ವಾಜಪೇಯಿ ಮಾತನಾಡಿ, ಮೂಲತಃ ಮೈಸೂರಿನವರೇ ಆದ ಎಂ.ಎನ್ ವ್ಯಾಸರಾವ್, ಬ್ಯಾಂಕ್ ವೃತ್ತಿಯಲ್ಲಿದ್ದರೂ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ಇಂದಿನ ಚಲನಚಿತ್ರಗಳ ಹಾಡುಗಳು ಸಮಾಜಕ್ಕೆ ಯಾವುದೇ ಸಂದೇಶ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ವ್ಯಾಸರಾವ್ ರನ್ನು ಸ್ಮರಿಸಲೇಬೇಕು ಎಂದರು.

ವೆಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಮಹರ್ಷಿ ಶಿಕ್ಷಣ ಸಂಸ್ಥೆಯ ಭವಾನಿ ಶಂಕರ್, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ತೇಜಸ್ ಶಂಕರ್, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಗುಣವತಿ ಇನ್ನಿತರರು ಉಪಸ್ಥಿತರಿದ್ದರು.