ಆಕಸ್ಮಿಕ ಬೆಂಕಿ ತಗುಲಿ 250ಕ್ಕೂ ಹೆಚ್ಚು ಮಾವಿನ ಮರ ಭಸ್ಮ

ಕೆ.ಆರ್.ಪೇಟೆ, ಏ.6- ಆಕಸ್ಮಿಕ ಬೆಂಕಿ ಬಿದ್ದು 250ಕ್ಕೂ ಹೆಚ್ಚು ಮಾವಿನಮರಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಡಿ.ಆರ್. ವೆಂಕಟೇಶ್ ಎಂಬುವವರಿಗೆ ಸೇರಿದ ಮಾವಿನ ತೋಟಕ್ಕೆ ಬೆಂಕಿಬಿದಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.

ದೊಡ್ಡಕ್ಯಾತನಹಳ್ಳಿ ಗ್ರಾಮದ ವ್ಯಾಪ್ತಿಗೆ ಸೇರಿದ ಸರ್ವೆ ನಂ. 31(ಬಿ)ರ ಜಮೀನಿನಲ್ಲಿ ರೈತ ವೆಂಕಟೇಶ್ ಅವರು ಸುಮಾರು 12ವರ್ಷಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿಯಿಂದ ಉತ್ತಮ ಮಾವಿನ ತಳಿಯನ್ನು ತಂದು ನಾಟಿ ಮಾಡಿದ್ದರು. ಅಲ್ಲದೆ ಕಳೆದ 6 ವರ್ಷಗಳಿಂದ ಫಸಲು ಪಡೆದುಕೊಳ್ಳುತ್ತಿದ್ದರು. ಇದರಿಂದ ವಾರ್ಷಿಕ ಲಕ್ಷಾಂತರ ರೂ. ವರಮಾನ ಪಡೆದುಕೊಳ್ಳುತ್ತಿದ್ದರು. ಈ ಬಾರಿಯೂ ಉತ್ತಮ ಫಸಲು ಬಂದಿತ್ತು. ಇನ್ನೇನು ಕಟಾವು ಮಾಡುವ ಹಂತದ ಲ್ಲಿದ್ದ ಮಾವಿನ ಹಣ್ಣಿನ ತೋಟಕ್ಕೆ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಮಾವಿನ ಫಸಲು ಸಮೇತ ಸುಮಾರು 250ಕ್ಕೂ ಹೆಚ್ಚು ಮಾವಿನ ಮರಗಳು ಸುಟ್ಟು ಹೋಗಿವೆ. ಇದರಿಂದ ರೈತ ಡಿ.ಆರ್. ವೆಂಕಟೇಶ್ ಅವರಿಗೆ ಸುಮಾರು 4ಲಕ್ಷ ರೂಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕೆ.ಆರ್.ಪೇಟೆ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೆ.ಆರ್.ಪೇಟೆ ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ಲೋಕೇಶ್ ಮತ್ತು ತೋಟಗಾರಿಕಾ ಅಧಿಕಾರಿ ಡಾ.ಆರ್.ಜಯರಾಂ, ಸಬ್ ಇನ್ಸ್‍ಪೆಕ್ಟರ್ ಬ್ಯಾಟರಾಯಣ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಷÀ್ಟವುಂಟಾಗಿ ರುವ ರೈತ ವೆಂಕಟೇಶ್ ಅವರಿಗೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ಲೋಕೇಶ್ ತಿಳಿಸಿದರು.