ಕಟ್ಟಡಕ್ಕೆ ಹೊಂದಿಕೊಂಡಂತೆ ಸಾವಿರ ಚದರಡಿಗಿಂತ ಅಧಿಕ ಖಾಲಿ ಜಾಗವಿದ್ದರೆ ಅದಕ್ಕೂ ತೆರಿಗೆ

ಮೈಸೂರು, ಮಾ.30(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕøತ ಆಸ್ತಿ ತೆರಿಗೆ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದ್ದು, ಇನ್ನು ಮುಂದೆ ಕಟ್ಟಡಕ್ಕೆ ಹೊಂದಿಕೊಂಡ ಸಾವಿರ ಚದರ ಅಡಿಗಿಂತ ಹೆಚ್ಚಿ ರುವ ಖಾಲಿ ನಿವೇಶನಕ್ಕೂ ತೆರಿಗೆ ಪಾವತಿಸಬೇಕಿದೆ.

ಕರ್ನಾಟಕ ಮಹಾನಗರ ಪಾಲಿಕೆ ಗಳ ಕಾಯ್ದೆ-1976ರ ಕಲಂ 108, 109 ಮತ್ತು 109(ಎ)ಗಳಿಗೆ ತಿದ್ದು ಪಡಿ ಮಾಡಿ, ಶಾಸನವಾಗಿರು ವಂತೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಪೌರಾಡಳಿತ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಮಾ.26ರಂದು ನಡೆದ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಶೇ.15ರಷ್ಟು ತೆರಿಗೆ ಹೆಚ್ಚಳಕ್ಕೆ ಅನುಮೋದನೆ ಪಡೆಯಲಾಗಿದೆ. ಅದರಂತೆ ವಸತಿ, ವಾಣಿಜ್ಯ-ಎ, ಶಾಲೆ, ಕಾಲೇಜು, ಚಾರಿಟಬಲ್ ಟ್ರಸ್ಟ್ ಹಾಗೂ ಖಾಲಿ ನಿವೇಶನಗಳ ಮೇಲಿನ ಪರಿಷ್ಕøತ ತೆರಿಗೆ ಏ.1ರಿಂದ ಜಾರಿಯಾಗಲಿದೆ. ವಾಣಿಜ್ಯ-ಬಿ ಆಸ್ತಿ ಗಳಿಗೆ ತೆರಿಗೆ ಏರಿಕೆಯಿಂದ ವಿನಾಯ್ತಿ ನೀಡಿದ್ದು, 2020-21ನೇ ಸಾಲಿನ ತೆರಿಗೆಯೇ ಅನ್ವಯವಾಗಲಿದೆ.

ಖಾಲಿ ನಿವೇಶನಕ್ಕೆ ತೆರಿಗೆ: ಕಟ್ಟಡಕ್ಕೆ ಹೊಂದಿಕೊಂಡಿ ರುವ ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ನಿವೇ ಶನಕ್ಕೆ ಇನ್ನು ಮುಂದೆ ಕಟ್ಟಡದ ಮೂಲ ಬೆಲೆಯ ಶೇ.0.2ರಷ್ಟು ತೆರಿಗೆ ವಿಧಿಸಲಾಗುತ್ತದೆ. 2005ರಲ್ಲಿ ಹೀಗೆ ಖಾಲಿ ನಿವೇಶನಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾ ರದ ಆದೇಶವನ್ನು ಪಾಲಿಸುವುದರ ಜೊತೆಗೆ ಸಾರ್ವ ಜನಿಕರಿಗೂ ಹೆಚ್ಚು ಹೊರೆಯಾಗದಂತೆ ತೆರಿಗೆ ನಿಗದಿಪಡಿ ಸಿರುವ ಕಾರಣ ಈ ರೀತಿ ಹೊಂದಾಣಿಕೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊರೆಯಾಗದಂತೆ ಏರಿಕೆ: ಈವರೆಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ.50 ರಷ್ಟನ್ನು ಪರಿಗಣಿಸಿ, ಆಸ್ತಿ ತೆರಿಗೆ ನಿಗದಿಪಡಿಸಲಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟನ್ನು ಪರಿಗಣಿಸಿ, ಸಾರ್ವಜನಿಕರಿಗೆ ಹೊರೆಯಾಗದಂತೆ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಹಾಗಾಗಿ 2020-21ನೇ ಸಾಲಿನ ತೆರಿಗೆ ಮೊತ್ತದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಯಾಗಲಿದೆಯಷ್ಟೇ. ಉದಾಹರಣೆಗೆ ಕುಂಬಾರಕೊಪ್ಪಲು ಕ್ರಾಸ್ ರಸ್ತೆಗಳಲ್ಲಿರುವ 20×30 ನಿವೇಶನಕ್ಕೆ ಕಳೆದ ಸಾಲಿ ನಲ್ಲಿ 777 ರೂ. ತೆರಿಗೆ ವಿಧಿಸಲಾಗಿತ್ತು. ಹಾಲಿ ಮಾರು ಕಟ್ಟೆ ಮೌಲ್ಯದ ಆಧಾರದಲ್ಲಿ ತೆರಿಗೆ ಪರಿಷ್ಕರಣೆ ಮಾಡಿ ದ್ದರೆ 1,197ರೂ ತೆರಿಗೆ ತೆರಬೇಕಿತ್ತು. ಆದರೆ ಸಾರ್ವ ಜನಿಕರ ಹಿತಾಸಕ್ತಿ ನಿಟ್ಟಿನಲ್ಲಿ ತೆರಿಗೆ ಪರಿಷ್ಕರಿಸುವ ಕಾರಣ ಶೇ.15ರಷ್ಟು ಹೆಚ್ಚಳಮಾಡಿದ್ದರೂ 20×30 ನಿವೇಶನಕ್ಕೆ 894 ರೂ. ನಿಗದಿಪಡಿಸಲಾಗಿದೆ. ಅಂದರೆ ಕಳೆದ ಸಾಲಿಗಿಂತ ಕೇವಲ 117 ರೂ. ಹೆಚ್ಚಾಗಲಿದೆ ಅಷ್ಟೇ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಾಕಿ ಪಾವತಿ: ಕಳೆದ ಸಾಲಿನವರೆಗೆ ಬಾಕಿ ಇರುವ ಆಸ್ತಿ ತೆರಿಗೆಯನ್ನು ಆಯಾ ಸಾಲಿನ ದರದಂತೆ ಲೆಕ್ಕಾಚಾರ ಮಾಡಿ, ಪಾವತಿಸಿಕೊಳ್ಳಲಾಗುತ್ತದೆ. ಅಂದರೆ ಶೇ.15ರಷ್ಟು ತೆರಿಗೆ ಹೆಚ್ಚಳದಿಂದ ಬಾಕಿ ತೆರಿಗೆ ಮೊತ್ತದಲ್ಲಿ ವ್ಯತ್ಯಾಸ ವಾಗುವುದಿಲ್ಲ. ಮುಂದಿನ ಪರಿಷ್ಕರಣೆವರೆಗೆ ಪ್ರತಿ ವರ್ಷ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಆಧರಿಸಿ, ನಿಯಮಾನುಸಾರ ತೆರಿಗೆ ಹೆಚ್ಚಿಸಲಾಗು ತ್ತದೆ. ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳ ಪರಿಷ್ಕರಣೆ ಆಗ ದಿದ್ದರೆ ಕೌನ್ಸಿಲ್ ಅನುಮೋದನೆಯೊಂದಿಗೆ ಶೇ.3ರಿಂದ-ಶೇ.5ರಷ್ಟು ಹೆಚ್ಚಳ ಮಾಡಲಾಗುವುದು. ಮೂಲ ಆಸ್ತಿ ತೆರಿಗೆಗೆ ಶೇಕಡವಾರು ಪ್ರಮಾಣದಲ್ಲಿ ನಿಗದಿಪಡಿಸಿರುವ ಉಪಕರ(ಸೆಸ್)ದಲ್ಲಿ ಯಾವುದೇ ಬದಲಾವಣೆ ಇರುವು ದಿಲ್ಲ. ಖಾಲಿ ನಿವೇಶನಗಳಿಗೆ ಈಗಾಗಲೇ ನಿಗದಿಯಾಗಿರುವ ಸ್ವಚ್ಛತಾ ಶುಲ್ಕ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.