ಸಂಸದ ವೀರೇಂದ್ರ ಕುಮಾರ್ ನಿಧನ ಐಎನ್‍ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ ಸಂತಾಪ

ನವದೆಹಲಿ, ಮೇ 29- ರಾಜ್ಯಸಭಾ ಸದಸ್ಯರಾಗಿದ್ದ ಎಂ.ಪಿ.ವೀರೇಂದ್ರಕುಮಾರ್ (83) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನಕ್ಕೆ `ಇಂಡಿಯನ್ ನ್ಯೂಸ್‍ಪೇಪರ್ಸ್ ಸೊಸೈಟಿ’ (ಐಎನ್‍ಎಸ್) ಪರವಾಗಿ ಅಧ್ಯಕ್ಷ ಶೈಲೇಶ್ ಗುಪ್ತಾ ಸಂತಾಪ ಸೂಚಿಸಿದ್ದಾರೆ.

ಐಎನ್‍ಎಸ್‍ನ ಮಾಜಿ ಅಧ್ಯಕ್ಷರಾದ ಎಂ.ಪಿ.ವೀರೇಂದ್ರ ಕುಮಾರ್ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು. ಹಿರಿಯ ಪತ್ರ ಕರ್ತರೂ ಆಗಿದ್ದ ಎಂಪಿವಿ, ಕೇಂದ್ರದಲ್ಲಿ ಹಣಕಾಸು ಖಾತೆ ಸಹಾಯಕ ಸಚಿವರಾಗಿದ್ದರು, ಮಾತೃಭೂಮಿ ಗ್ರೂಪ್ ಆಫ್ ನ್ಯೂಸ್‍ಪೇಪರ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಪಿಟಿಐ ಅಧ್ಯಕ್ಷರಾಗಿದ್ದರು. ವಿವಿಧ ವಿಷಯಗಳ ಮೇಲೆ ಸಾಕಷ್ಟು ಲೇಖನಗಳನ್ನು ಬರೆದಿದ್ದರು. ಉತ್ತಮ ಸಾಹಿತ್ಯ ಕೃತಿಗಳ ರಚನೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ಅಲ್ಲದೇ ಇನ್ನೂ ಹಲವು ಪ್ರಶಸ್ತಿಗಳಿಂದ ಅವರು ಪುರಸ್ಕøತರಾಗಿದ್ದರು. ಸಮಾಜವಾದಿ ನಾಯಕರಾಗಿದ್ದ ಎಂಪಿವಿ, ಬಡವರು, ದುರ್ಬಲ ವರ್ಗದವರ ಧ್ವನಿಯಾಗಿದ್ದರು. ಬಹಳ ಜನಪ್ರೀತಿಯ ವ್ಯಕ್ತಿಯಾಗಿದ್ದರು ಎಂದು ಗುಪ್ತಾ ನೆನಪಿಸಿಕೊಂಡಿದ್ದಾರೆ. ವೀರೇಂದ್ರ ಕುಮಾರ್ ಅವರ ಅಗಲಿಕೆಯಿಂದಾದ ದುಃಖವನ್ನು ಭರಿಸಲು ಅವರ ಕುಟುಂಬಕ್ಕೆ ದೇವರು ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ಶೈಲೇಶ್ ಗುಪ್ತಾ ದೇವರಲ್ಲಿ ಪ್ರಾರ್ಥಿಸಿದ್ದಾರೆ.