ಶೀಘ್ರದಲ್ಲೇ ಮುಡಾದಲ್ಲಿ ಆನ್‍ಲೈನ್ ಮೂಲಕ ಕಂದಾಯ ಪಾವತಿ, ಇ-ಖಾತಾ ವ್ಯವಸ್ಥೆ

ಮೈಸೂರು, ಮೇ 9(ಆರ್‍ಕೆ)- ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ)ದ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ತೆರಿಗೆ ಪಾವತಿಗೆ ಮುಂದಿನ 6 ವಾರಗಳಲ್ಲಿ ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮುಡಾ ನೂತನ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದ್ದಾರೆ.

ಈವರೆಗೆ ನಿವೇಶನ, ಕಟ್ಟಡ ಅಥವಾ ಇನ್ನಿತರ ಆಸ್ತಿ ಗಳಿಗೆ ಸಂಬಂಧಿಸಿದಂತೆ ಕಂದಾಯವನ್ನು ಮುಡಾ ಕಚೇರಿಯ ಕೌಂಟರ್‍ಗಳಲ್ಲೇ ಪಾವತಿಸಬೇಕಾಗಿತ್ತು. ಇದೀಗ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಿರ್ಬಂಧವಿರುವ ಕಾರಣ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕಾದ ಕಂದಾಯವನ್ನು ಜನರು ಪಾವತಿಸಲು ಸಾಧ್ಯವಾಗಿಲ್ಲ. ಜನರು ಗುಂಪು ಕಟ್ಟಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಕೌಂಟರ್ ಗಳನ್ನು ತೆರೆದಿಲ್ಲ. ಒಂದು ವೇಳೆ ಆನ್‍ಲೈನ್ ವ್ಯವಸ್ಥೆ ಇದ್ದಿದ್ದರೆ, ಜನರು ಕಂದಾಯ ಪಾವತಿಸಲು ಅನುಕೂಲ ವಾಗುತ್ತಿತ್ತು ಎಂದು ಅವರು ತಿಳಿಸಿದರು.

ವಸತಿ ಸಮುಚ್ಛಯ : ಮೈಸೂರು ನಗರದ ವಿವಿಧೆಡೆ ಇರುವ ಮುಡಾ ಸ್ಥಳಗಳಲ್ಲಿ ಬಹುಮಹಡಿ ವಸತಿ ಸಮು ಚ್ಛಯಗಳನ್ನು ನಿರ್ಮಿಸಿ ಕೈಗೆಟಕುವ ದರದಲ್ಲಿ ಮನೆ ಗಳನ್ನು ಹಂಚುವ ಗುಂಪು ಮನೆ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಅನು ಮೋದನೆ ಪಡೆದು ನಂತರ ಸರ್ಕಾರದ ಆಡಳಿತಾತ್ಮಕ ಅನುಮೋದನೆಗೆ ಪ್ರಕ್ರಿಯೆ ಆರಂಭಿಸಲಾಗುವುದು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ರಾಜ್ಯ ಗಳಿಗೆ ತೆರಳಿ ಅಧ್ಯಯನ ಮಾಡಿ ಬಂದು ಅದೇ ಮಾದರಿ ಯಲ್ಲಿ ಅತೀ ಕಡಿಮೆ ದರದಲ್ಲಿ ಮನೆಗಳನ್ನು ಅಗತ್ಯವಿರು ವವರಿಗೆ ನಿರ್ಮಿಸಿಕೊಡಲು ಕ್ರಮ ವಹಿಸುವುದು ನಮ್ಮ ಆದ್ಯತೆಯಾಗಿದೆ ಎಂದ ಅವರು, ಮುಡಾ ಆಸ್ತಿಗಳನ್ನು ಸಂರ ಕ್ಷಣೆ ಮಾಡುವುದು, ಆದಾಯದ ಮೂಲಗಳನ್ನು ಹೆಚ್ಚಿಸು ವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸಕ್ತ ಸಾಲಿನಲ್ಲಿ ಮಂಡಿಸಿರುವ ಅಯವ್ಯಯದಂತೆ ಕಾರ್ಯ ನಿರ್ವಹಿಸಲು ಮುಂದಾಗಿರುವುದಾಗಿ ತಿಳಿಸಿದರು.

ಕಡತ ಸಂರಕ್ಷಣೆ : ಮುಂದಿನ ದಿನಗಳಲ್ಲಿ ಮುಡಾ ಕಚೇರಿ ಯಲ್ಲಿರುವ ಎಲ್ಲಾ ಕಡತಗಳನ್ನು ಸ್ಕ್ಯಾನ್‍ಮಾಡಿಸಿ ತಂತ್ರಾಂಶ ದಲ್ಲಿ ಸೇರಿಸುವ ಮೂಲಕ ಯಾವುದೇ ಕಡತ ನಾಪತ್ತೆ ಯಾಗದಂತೆ ಕ್ರಮ ವಹಿಸಬೇಕಾಗಿದೆ. ಅದೇ ರೀತಿ ಕಚೇರಿಯ ಎಲ್ಲಾ ವಲಯ ಹಾಗೂ ವಿಭಾಗಗಳ ಕಾರ್ಯ ನಿರ್ವಹಣೆಯನ್ನು ಆನ್‍ಲೈನ್‍ನಲ್ಲೇ ಮಾಡುವ ಬಗ್ಗೆ ಈಗಾಗಲೇ ಅಧ್ಯಯನ ನಡೆಸಲಾಗುತ್ತಿದ್ದು, ಪಾರದರ್ಶಕ ಆಡಳಿತಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರಸ್ತುತ ಇರುವ ರಿಂಗ್ ರಸ್ತೆಯ ಬೀದಿದೀಪ ನಿರ್ವಹಣೆ ಮತ್ತು ವಿದ್ಯುತ್ ಶುಲ್ಕ ಪಾವತಿಗೆ ಪಾಲಿಕೆ ಮತ್ತು ಮುಡಾ ಶೇ.50ರಷ್ಟು ಹಣ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿ ದ್ದಾರೆ. ಅದರಂತೆ ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಒಂದು ವಾರದೊಳಗಾಗಿ ಪಾವತಿಸಲಾಗುವುದು ಹಾಗೂ ಈಗಾಗಲೇ ಹಿಂದೆ ಪ್ರಸ್ತಾಪಿಸಿರುವ ಪೆರಿಪೆರಲ್ ರಿಂಗ್ ರಸ್ತೆ ಯೋಜನೆಯ ಅನುಷ್ಠಾನ ಕುರಿತಂತೆಯೂ ಪ್ರಾಧಿ ಕಾರದ ಸಭೆಯಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಡಾ. ನಟೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.