`ಹೂಟಗಳ್ಳಿ ನಗರಸಭೆ’ ರಚನೆ

ಬೆಂಗಳೂರು,ನ.12(ಕೆಎಂಶಿ)-ಮೈಸೂರಿನ ಕೂರ್ಗಳ್ಳಿ, ಹೂಟಗಳ್ಳಿ, ಬೆಳವಾಡಿ ಹಾಗೂ ಹಿನಕಲ್ ಗ್ರಾಮ ಪಂಚಾಯಿತಿಯನ್ನು ಸೇರಿಸಿ ಹೂಟಗಳ್ಳಿ ನಗರಸಭೆ ರೂಪಿಸಲು ಸಂಪುಟ ಸಮ್ಮತಿಸಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಅಲ್ಲದೆ, ಮೈಸೂರು ಜಿಲ್ಲೆಯ ಶ್ರೀರಾಮಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿ ಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿಯನ್ನು ಸಹ ನಗರಸಭೆಯಾಗಿ ಪರಿವರ್ತಿಸಿದ್ದು, ಇದರ ವ್ಯಾಪ್ತಿಗೆ ಲಕ್ಷ್ಮೀಪುರ, ಚಿಕ್ಕಬಿದರಕಲ್ಲು, ಮತ್ತು ಶ್ರೀಕಂಠಪುರ ಗ್ರಾಮ ಪಂಚಾ ಯಿತಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರು ವರದಿ: ಮೈಸೂರಿನಲ್ಲಿ 4 ಹೊಸ ಪಟ್ಟಣ ಪಂಚಾಯ್ತಿ ಹಾಗೂ ಒಂದು ನಗರಸಭೆ ರೂಪುಗೊಳ್ಳುವಲ್ಲಿ ವರ್ಷದಿಂದ ಪ್ರಕ್ರಿಯೆ ನಡೆದಿತ್ತು. ಗ್ರಾಮ ಪಂಚಾಯ್ತಿ ಗಳಿಂದ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಮೂಲಕ ಜಿಲ್ಲಾಡಳಿತಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ವಿ.ಸೋಮಣ್ಣನವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಡೆಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಸಂಬಂಧ ವಿಸ್ತøತ ಚರ್ಚೆಯಾಗಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿತ್ತು. ಅಲ್ಲದೆ ಹಾಲಿ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲೂ ಪ್ರತ್ಯೇಕ ಸಭೆ ನಡೆಸಿ, ಅಂತಿಮವಾಗಿ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಇದೀಗ ಸಂಪುಟ ಅನುಮೋದಿಸಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ನಗರದ ರಿಂಗ್‍ರಸ್ತೆ ಒಳಭಾಗಕ್ಕಿ ರುವ ಪ್ರದೇಶಗಳನ್ನು ಮೈಸೂರು ನಗರ ಪಾಲಿಕೆಗೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದ ಸಂದರ್ಭದಲ್ಲೇ ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿ ರಚನೆಗೆ ಸಂಪುಟ ಅಸ್ತು ಎಂದಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ. ಜಿ.ಟಿ.ದೇವೇಗೌಡರು ಹಾಗೂ ಸಂಸದ ಪ್ರತಾಪ್‍ಸಿಂಹ, ಗ್ರಾಪಂಗಳನ್ನು ಪಾಲಿಕೆಗೆ ಸೇರಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ, ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಪೂರಕವಾಗಿ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡುವಂತೆ ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೂ ಪತ್ರ ಬರೆದು, ಆಗ್ರಹಿಸಿದ್ದರು. ಆದರೆ ಕಳೆದ ಕೌನ್ಸಿಲ್‍ನಲ್ಲಿ ಈ ವಿಷಯವನ್ನೇ ಕಾರ್ಯ ಸೂಚಿಯಲ್ಲಿ ಸೇರಿಸಿರಲಿಲ್ಲ. ಅಲ್ಲದೆ ಅನೇಕ ಸದಸ್ಯರು ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿ ಸಿದ್ದರಲ್ಲದೆ, ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ನೀಡಬೇಕೆಂದು ಆಗ್ರಹಿಸಿದ್ದರು. ಕಾರ್ಯಸೂಚಿಯಲ್ಲಿ ವಿಷಯ ಸೇರಿಸದಿದ್ದರಿಂದ ಅಸಮಾಧಾನಗೊಂಡ ಶಾಸಕ ಜಿಟಿಡಿ, ಸಭೆಯನ್ನು ಬಹಿಷ್ಕರಿಸಿ, ಹೊರ ನಡೆದರು. ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಅಸಹಕಾರ ವ್ಯಕ್ತವಾದ ಬೆನ್ನಲ್ಲೇ ಪಟ್ಟಣ ಪಂಚಾಯ್ತಿ ಹಾಗೂ ನಗರ ಸಭೆ ರೂಪಿಸಲು ಸಂಪುಟ ಒಪ್ಪಿದೆ. ಇದರ ಹಿಂದೆ ಅಸಹಕಾರ ತೋರಿದ ನಗರ ಪಾಲಿಕೆಗೆ ಸೆಡ್ಡು ಹೊಡೆದು, ನಗರದ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಶಾಸಕ ಜಿ.ಟಿ.ದೇವೇಗೌಡರು, ಸಂಸದ ಪ್ರತಾಪ್‍ಸಿಂಹ ಅಂತಿಮವಾಗಿ ತಮ್ಮ ಗುರಿ ಸಾಧನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೈಗಾರಿಕಾ ಭೂಮಿ, ಅಪಾರ್ಟ್‍ಮೆಂಟ್
ನೋಂದಣಿ ಮುದ್ರಾಂಕ ಶುಲ್ಕ ಶೇ.2 ವಿನಾಯ್ತಿ
ಬೆಂಗಳೂರು,ನ.12(ಕೆಎಂಶಿ)-ಕೈಗಾರಿಕಾ ಭೂಮಿ ನೋಂದಣಿ ಹಾಗೂ ಅಪಾರ್ಟ್ ಮೆಂಟ್ ಖರೀದಿಸುವಾಗ ಇರುವ ನೋಂದಣಿ ಮುದ್ರಾಂಕ ಶುಲ್ಕದಲ್ಲಿ ಶೇ.2ರಷ್ಟು ವಿನಾಯಿತಿ ನೀಡಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಮಾಧುಸ್ವಾಮಿ, ಸಂಪನ್ಮೂಲ ಕ್ರೋಢೀಕರಣ, ಕೈಗಾರಿಕಾ ಅಭಿವೃದ್ಧಿ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶೇ.5ರಿಂದ 3ಕ್ಕೆ ಮುದ್ರಾಂಕ ಶುಲ್ಕವನ್ನು ಇಳಿಸಲಾಗಿದೆ ಎಂದರು.

ಅಪಾರ್ಟ್‍ಮೆಂಟ್ ಖರೀದಿಸುವಾಗ 20 ಲಕ್ಷ ರೂ ಒಳಗಿನ ಖರೀದಿಗೆ ಮಾತ್ರ ಶುಲ್ಕ ವಿನಾಯ್ತಿ ಅನ್ವಯವಾಗಲಿದೆ ಎಂದರು. ಮಲೆನಾಡು ಪ್ರದೇಶದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಸಂರಕ್ಷಣಾ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕುರಿತಂತೆ ಡಾ.ಕಸ್ತೂರಿ ರಂಗನ್ ವರದಿ ಜಾರಿಗಾಗಿ ಸಚಿವ ಸಂಪುಟದ ಉಪ ಸಮಿತಿ ರಚಿಸಲು ಸಭೆ ಒಪ್ಪಿಗೆ ನೀಡಿದೆ. ವರದಿ ಜಾರಿಗೊಳಿಸುವ ಸಂಬಂಧ ಕೆಲ ಅಪಸ್ವರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ. ಸಮಿತಿಯಲ್ಲಿ ಯಾರು ಸದಸ್ಯರಾಗಿರಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಯವರು ತೀರ್ಮಾನಕೈಗೊಳ್ಳಲಿದ್ದಾರೆ. ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಪೀಠಕ್ಕೆ ನೀಡಲಾಗಿದ್ದ 33.18 ಎಕರೆ ಪ್ರದೇಶವನ್ನು ಮಠ ಹಿಂದಿರುಗಿಸಿದ್ದು, ಅದನ್ನು ಸರ್ಕಾರ ಹಿಂದಕ್ಕೆ ಪಡೆಯಲು ತೀರ್ಮಾನಿಸಿದೆ.