ಮೈಸೂರು ವಕೀಲರ ಸಂಘದ ಅಧ್ಯಕ್ಷ  ಎಸ್.ಆನಂದಕುಮಾರ್ ತಂಡ ಪದಗ್ರಹಣ

ಮೈಸೂರು:  ಮೈಸೂರು ವಕೀಲರ ಸಂಘದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎಸ್. ಆನಂದಕುಮಾರ್ ಮತ್ತು ಅವರ ತಂಡದ ಇತರೆ ಪದಾಧಿಕಾರಿಗಳು ಗುರುವಾರ ಅಧಿಕಾರ ಸ್ವೀಕರಿಸಿದರು. ನ್ಯಾಯಾಲಯದ ಆವರಣ ದಲ್ಲಿರುವ ಸಂಘದ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷ ಜಿ.ವಿ.ರಾಮ ಮೂರ್ತಿ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎಸ್. ಆನಂದಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಕ್ಯಾಂಟೀನ್ ಸುಧಾರಣೆ ಮಾಡುವುದಾಗಿ ಹೇಳಿದರು.

ನ್ಯಾಯಾಲಯಕ್ಕೆ ಪ್ರತಿ ದಿನ ವಕೀಲರು, ಸಾರ್ವಜನಿಕರು, ಪೊಲೀಸರು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಆದರೆ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ತಾವು ಮತ್ತು ತಮ್ಮ ತಂಡ ಪ್ರಯತ್ನಿಸುವುದಾಗಿ ತಿಳಿಸಿದರು. ಮಹಿಳಾ ವಕೀಲರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಹ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ದಲ್ಲಿ ಕಾರ್ಯದರ್ಶಿ ಬಿ.ಶಿವಣ್ಣ, ರಾಜ್ಯ ವಕೀಲರ ಪರಿಷತ್ ಸದಸ್ಯ ಚಂದ್ರಮೌಳಿ, ಮಾಜಿ ಕಾರ್ಯದರ್ಶಿ ಕೆ.ಬಿ.ಸುರೇಶ್, ಉಪಾಧ್ಯಕ್ಷ ಶಿವಣ್ಣೇಗೌಡ, ಖಜಾಂಚಿ ಜಿ.ಪಿ.ಚಂದ್ರ್ರಶೇಖರ್, ಜಂಟಿ ಕಾರ್ಯ ದರ್ಶಿ ಸಿ.ಕೆ.ರುದ್ರಮೂರ್ತಿ, ಸದಸ್ಯರಾದ ಭಾಸ್ಕರ ಆರಾಧ್ಯ, ಅಮೃತ್ ರಾಜ್, ಪಡುವಾರಹಳ್ಳಿ ಗಿರೀಶ್, ಎಸ್.ಕೆ.ರಾಜು, ಹರದೂರು ಜವರೇಗೌಡ ಇನ್ನಿತರರು ಉಪಸ್ಥಿತರಿದ್ದರು.