ಮೈಸೂರಲ್ಲಿ ದೇಶದಲ್ಲೇ ಮೊಟ್ಟ ಮೊದಲ `ಸ್ಯಾಂಡಲ್ ಮ್ಯೂಸಿಯಂ’

ಮೈಸೂರು, ನ.9- ಸಾಂಸ್ಕøತಿಕ ನಗರಿ ಮೈಸೂರಿನ ಮ್ಯೂಸಿಯಂಗಳ ಸಾಲಿಗೆ ಮತ್ತೊಂದು ಸೇರ್ಪಡೆ ಯಾಗಲು ಅಣಿಯಾಗುತ್ತಿದೆ. `ಶ್ರೀಗಂಧದ ಬೀಡು-ನಮ್ಮ ಕರುನಾಡು’ ನುಡಿಮುತ್ತಿಗೆ ತಕ್ಕಂತೆ ದೇಶ ದಲ್ಲಿಯೇ ಮೊಟ್ಟ ಮೊದಲ ‘ಸ್ಯಾಂಡಲ್ ಮ್ಯೂಸಿಯಂ’ ಮೈಸೂರಲ್ಲಿ ಶೀಘ್ರದಲ್ಲಿ ಆರಂಭಗೊಳ್ಳುತ್ತಿದೆ.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದ ಶ್ರೀಗಂಧದ ಕೋಠಿ (ಸ್ಯಾಂಡಲ್ ವುಡ್ ಡಿಪೋ)ಯಲ್ಲಿ ಈ ಮ್ಯೂಸಿಯಂ ನಿರ್ಮಿಸ ಲಾಗುತ್ತಿದ್ದು, ತಿಂಗಳಾಂತ್ಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಇಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಒಂದು ಶ್ರೀಗಂಧದ ಮರವನ್ನು 20 ಬಗೆಯಲ್ಲಿ ವರ್ಗೀಕರಣ ಮಾಡಲಾಗುತ್ತದೆ. ಎಲ್ಲಾ ಭಾಗಗಳೂ ಉಪಯೋಗಕಾರಿ. ಅದನ್ನು ಸಚಿತ್ರದೊಂದಿಗೆ ಪ್ರದರ್ಶಿ ಸಲಾಗಿದೆ. ಶ್ರೀಗಂಧದ ಮರದಿಂದ ತಯಾರಿಸುವ ವಿವಿಧ ಉತ್ಪನ್ನಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಶ್ರೀಗಂಧದ ಪರಿಚಯ, ಬೇಸಾಯ, ಬೆಳೆದಿರುವ ಗಂಧದ ಮರವನ್ನು ಹೇಗೆ ಮಾರಾಟ ಮಾಡುವುದು, ದೇಶ-ವಿದೇಶಗಳಲ್ಲಿರುವ ಬೇಡಿಕೆ ಕುರಿತಂತೆ ಮಾಹಿತಿ ಯನ್ನು ಪ್ರದರ್ಶಿಸಲಾಗುತ್ತಿದೆ. ಇಲ್ಲಿ ಶ್ರೀಗಂಧದ ಮರ ಗಳ ವಿವಿಧ ಆಕಾರ ಹಾಗೂ ಗಾತ್ರದ ತುಂಡುಗಳನ್ನು ಪ್ರದರ್ಶಿಸಲಾಗಿದೆ. ತ್ರಿಡಿ ಎಫೆಕ್ಟ್‍ನ ಗಂಧದ ಮರ ದಿಂದ ಮಾಡಿದ ಆಕೃತಿಯನ್ನು ಪ್ರದರ್ಶನಕ್ಕಿಡಲು ಚಿಂತನೆ ನಡೆಸಲಾಗಿದೆ.

18 ಲಕ್ಷ ರೂ. ವೆಚ್ಚ: ಮೈಸೂರಲ್ಲಿ ನಿರ್ಮಿಸಲಾಗು ತ್ತಿರುವ ಈ ಸ್ಯಾಂಡಲ್ ಮ್ಯೂಸಿಯಂ ದೇಶದಲ್ಲೇ ಮೊದಲ ಮ್ಯೂಸಿಯಂ ಎಂಬ ಹಿರಿಮೆ ಹೊಂದಿದೆ.

ಅರಣ್ಯ ಇಲಾಖೆಯು 17×8 ಮೀಟರ್ ವಿಸ್ತೀರ್ಣ ದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಶ್ರೀಗಂಧದ ಸಂರಕ್ಷಣೆ, ಬೆಳೆಯ ಕುರಿತು ರೈತರಿಗೆ, ಸಂಘ-ಸಂಸ್ಥೆಗಳಿಗೆ ಸರಳ ಮತ್ತು ಪ್ರಾಯೋಗಿಕವಾಗಿ ಮಾಹಿತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆಡಿಟೋರಿಯಂ: ಮ್ಯೂಸಿಯಂ ಪಕ್ಕದಲ್ಲೇ ಒಂದು ಕೊಠಡಿಯಿದ್ದು, ಅದನ್ನು ಆಡಿಟೋರಿಯಂನಂತೆ ಬಳಸಿಕೊಳ್ಳಲಾಗುತ್ತಿದೆ. ಸ್ಯಾಂಡಲ್ ಮ್ಯೂಸಿಯಂ ನೋಡಲು ಬರುವವರಿಗೆ ಗಂಧದ ಬಗ್ಗೆ ಆಡಿಯೋ ಮತ್ತು ವಿಡಿಯೋ ಮೂಲಕ ಉಪಯುಕ್ತ ಮಾಹಿತಿ ಬಿತ್ತರಿಸಲಾಗುತ್ತದೆ. ಇದಕ್ಕಾಗಿ ಇಲ್ಲಿ ಡಿಜಿಟಲ್ ಪರದೆ ಅಳವಡಿಸಲಾಗುತ್ತಿದೆ.

ಆನೆ ದಂತ, ಶ್ರೀಗಂಧ ದಾಸ್ತಾನು: ಮೈಸೂರಲ್ಲಿರುವ ಶ್ರೀಗಂಧ ಕೋಠಿಯಲ್ಲಿ ಹಲವು ವರ್ಷಗಳಿಂದ ಬೇಟೆಗಾರರಿಂದ ವಶಪಡಿಸಿಕೊಂಡಿರುವ 3,960 ಕ್ಕಿಂತ ಹೆಚ್ಚು ದಂತಗಳನ್ನು ಸಂರಕ್ಷಿಸಲಾಗಿದೆ. ಅವುಗಳಲ್ಲಿ ನಾನಾ ಗಾತ್ರದ ದಂತಗಳೂ ಸೇರಿವೆ. ಹೆಣ್ಣಾನೆಗಳಲ್ಲಿ ಕಂಡು ಬರುವ 5-8 ಇಂಚು ಉದ್ದದ ದಂತಗಳನ್ನು ಗಂಧದ ಕೋಟೆಯಲ್ಲಿಡಲಾಗಿದೆ.
ಈ ಹಿಂದೆ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಪ್ರಭಾವಿ ಹಾಗೂ ಶ್ರೀಮಂತರ ಮನೆಯಲ್ಲಿ ದಂತ ಇಟ್ಟುಕೊಳ್ಳುತ್ತಿದ್ದರು. ಆದರೆ ದಶಕದ ಹಿಂದೆ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಮನೆಯಲ್ಲಿ ದಂತ ಹಾಗೂ ಪ್ರಾಣಿಗಳ ಚರ್ಮದಿಂದ ತಯಾರಿಸಿದ ಸ್ಟಪ್ಡ್ ಅನಿಮಲ್(ಪ್ರಾಣಿ ಪ್ರಸಾದನ) ಇಟ್ಟುಕೊಳ್ಳುವುದು ಅಪರಾಧ ಎಂದು ಪರಿಗಣಿಸಿ ಅವುಗಳನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸುವಂತೆ ಸೂಚನೆ ನೀಡಲಾಗಿತ್ತು. ಹಾಗೆ ಇಲಾಖೆ ವಶಕ್ಕೆ ಬಂದ ಹಾಗೂ ಬೇಟೆಗಾರರಿಂದ ವಶಪಡಿಸಿಕೊಳ್ಳಲಾದ ದಂತಗಳನ್ನು ಈ ಕೋಠಿಯಲ್ಲಿಡಲಾಗಿದೆ. ಸರ್ಕಾರದ ಆದೇಶದ ಮೇರೆಗೆ ರಕ್ಷಣಾ ಇಲಾಖೆಗೆ 540 ದಂತವನ್ನು ನೀಡಲಾಗಿದೆ. ಇದರೊಂದಿಗೆ ಪ್ರಸ್ತುತ ಎಣ್ಣೆ ಅಂಶವುಳ್ಳ ಉತ್ತಮ ಗುಣಮಟ್ಟದ ಅಂದಾಜು 10 ಟನ್ ಶ್ರೀಗಂಧ ಹಾಗೂ ಎಣ್ಣೆ ರಹಿತ 40 ಟನ್ ವೈಟ್‍ವುಡ್ ಸಂಗ್ರಹವಿದೆ. ಪ್ರತಿ ವರ್ಷ ಎರಡು ಬಾರಿ ಗಂಧದ ಕೋಠಿಯಲ್ಲಿರುವ ಶ್ರೀಗಂಧದ ಮರಗಳನ್ನು ಹರಾಜು ಮಾಡಲಾಗುತ್ತದೆ. ಇಲಾಖೆಯ ವೆಬ್‍ಸೈಟ್‍ನಲ್ಲಿ ರಿಜಿಸ್ಟರ್ ಮಾಡಿಕೊಂಡು ಯಾರೂ ಬೇಕಾದರೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಏಳು ಸುತ್ತಿನ ಕೋಟೆ: ಶ್ರೀಗಂಧದ ಕೋಟೆ ನಿಜಕ್ಕೂ ಏಳು ಸುತ್ತಿನ ಕೋಟೆಯಂತಿದೆ. ಅತ್ಯಂತ ಹೆಚ್ಚಿನ ಭದ್ರತೆಯಲ್ಲಿ ಶ್ರೀಗಂಧ ಹಾಗೂ ದಂತಗಳನ್ನು ಸಂರಕ್ಷಿಸಲಾಗಿದೆ. ಸಿಸಿ ಕ್ಯಾಮರಾ, ಸಶಸ್ತ್ರವುಳ್ಳ ಭದ್ರತಾ ಸಿಬ್ಬಂದಿ ಕಣ್ಗಾವಲು ಶ್ರೀಗಂಧ ಕೋಠಿಗಿದೆ.

ಎಂ.ಟಿ.ಯೋಗೇಶ್‍ಕುಮಾರ್