ಆ.25ಕ್ಕೆ ಮೈಸೂರು ಮೇಯರ್ ಚುನಾವಣೆ

ಮೈಸೂರು, ಆ.೧೭(ಎಸ್‌ಬಿಡಿ)- ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ ಅಂತೂ ಇಂತೂ ಮುಹೂರ್ತ ನಿಗದಿಯಾಗಿದ್ದು, ೩೬ನೇ ವಾರ್ಡ್ ಉಪಚುನಾವಣೆಗೂ ಮುನ್ನವೇ ನೂತನ ಮೇಯರ್ ಆಯ್ಕೆಯಾಗಲಿದ್ದಾರೆ.

ಮೇಯರ್ ಚುನಾವಣೆಯನ್ನು ಆ.೨೫ಕ್ಕೆ ನಿಗದಿ ಪಡಿಸಲಾಗಿದ್ದು, ಅಂದು ಮಧ್ಯಾಹ್ನ ೧೨ಕ್ಕೆ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣಾ ಸಭೆ ನಡೆಯಲಿದೆ. ಸರ್ಕಾರಿ ರಜಾದಿನ ಹೊರತು ಪಡಿಸಿ ಆ.೧೭ರಿಂದ ೨೪ರವರೆಗೆ ಕಚೇರಿ ವೇಳೆಯಲ್ಲಿ ಹಾಗೂ ಆ.೨೫ರಂದು ಚುನಾವಣಾ ಸಭೆ ಆರಂಭ ವಾಗುವ ೨ ಗಂಟೆ ಮುಂಚಿತವಾಗಿ ಸ್ಪರ್ಧಾಕಾಂಕ್ಷಿ ಗಳು ತಮ್ಮ ಉಮೇದುವಾರಿಕೆಯನ್ನು ಕೌನ್ಸಿಲ್ ಕಾರ್ಯದರ್ಶಿಗೆ ಸಲ್ಲಿಸಬಹುದು. ಚುನಾವಣೆ ಹಿನ್ನೆಲೆ ಯಲ್ಲಿ ನಿಯಮಾವಳಿಯಂತೆ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ನಗರ ಪಾಲಿಕಾ ಸದಸ್ಯರಿಗೆ ತಿಳುವಳಿಕೆ ಪತ್ರವನ್ನು ಜಾರಿಗೊಳಿಸಲಾಗಿದೆ ಎಂದು ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ. ಹಿಂದಿನ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿರುವ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸಿದ್ದ ೩೬ನೇ ವಾರ್ಡ್ಗೆ ಸೆ.೩ರಂದು ಉಪ ಚುನಾವಣೆ ನಿಗದಿಯಾಗಿರುವುದು ಗಮನಾರ್ಹ.

ಜೂ.೧೧ರಂದು ನಡೆಯಬೇಕಿತ್ತು: ಹಿಂದಿನ ಮೇಯರ್ ರುಕ್ಮಿಣಿ ಮಾದೇಗೌಡ ಅವರು ಆಸ್ತಿ ನಮೂನೆ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆಂದು ರಜನಿ ಅಣ್ಣಯ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪರಿಣಾಮ ರುಕ್ಮಿಣಿ ಅವರ ಸದಸ್ಯತ್ವವನ್ನು ಹೈಕೋರ್ಟ್ ಮೇ ೨೪ರಂದು ರದ್ದು ಮಾಡಿ, ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ರುಕ್ಮಿಣಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರು ಜೂ.೧೧ರಂದು ಮೇಯರ್ ಚುನಾವಣೆಗೆ ದಿನಾಂಕ ನಿಗದಿಗೊಳಿಸಿ, ಅಗತ್ಯ ಸಿದ್ಧತೆಗೆ ಸೂಚಿಸಿದ್ದರು. ಆದರೆ ಚುನಾವಣಾ ಅಧಿಸೂಚನೆ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಪ್ರದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮೈಸೂರಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಜೂ.೨೧ರವರೆಗೆ ಮೇಯರ್ ಚುನಾವಣೆಗೆ ತಡೆ ನೀಡಿ, ನಂತರ ಚುನಾವಣೆ ನಡೆಸಲು ಮರುಪರಿಶೀಲಿಸುವಂತೆ ಚುನಾವಣಾ ಸಭೆ ನಡೆಯಬೇಕಿದ್ದ ಹಿಂದಿನ ದಿನ(ಜೂ.೧೦)ವೇ ಆದೇಶಿಸಿತ್ತು. ನಂತರದಲ್ಲಿ ಉಪಮೇಯರ್ ಅನ್ವರ್ ಬೇಗ್, ಪ್ರಭಾರ ಮೇಯರ್ ಆಗಿ ಅಧಿಕಾರ ವಹಿಸಿಕೊಂಡರು. ನಂತರದಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯೆ ಶಾಂತಕುಮಾರಿ ಅವರು ಮೇಯರ್ ಚುನಾವಣೆ ರದ್ದತಿ ಬಗ್ಗೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೇಯರ್ ಚುನಾವಣೆ ನಡೆಸಿ, ಸೆಪ್ಟೆಂಬರ್ ೧ರೊಳಗೆ ವರದಿ ಸಲ್ಲಿಸಲು ಆದೇಶಿಸಿತು. ಈ ಹಿನ್ನೆಲೆಯಲ್ಲಿ ಇದೀಗ ಆ.೨೫ಕ್ಕೆ ಚುನಾವಣೆ ನಿಗದಿ ಪಡಿಸಲಾಗಿದೆ.

ಅಧಿಕಾರಕ್ಕೆ ಬಿಜೆಪಿ ತಂತ್ರ: ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿAದ ಮೈಸೂರು ನಗರ ಪಾಲಿಕೆಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ತಂತ್ರಗಾರಿಕೆ ರೂಪಿಸಿತ್ತು. ಇದಕ್ಕೆ ಪೂರಕವಾಗಿ ಮೇಯರ್ ಸ್ಥಾನಕ್ಕೆ `ಸಾಮಾನ್ಯ ಮಹಿಳೆ’ ಮೀಸಲಾತಿ ನಿಗದಿಯಾಯಿತು. ಬಿಜೆಪಿಯ ಹಿರಿಯ ಸದಸ್ಯೆ ಸುನಂದಾ ಪಾಲನೇತ್ರ ಮೇಯರ್ ಆಗುವುದು ಬಹುತೇಕ ಖಚಿತ ಎನ್ನುವಂತೆ ಸಾಕಷ್ಟು ಬೆಳವಣಿಗೆ ನಡೆದಿತ್ತು. ಅತ್ತ ಜೆಡಿಎಸ್-ಕಾಂಗ್ರೆಸ್ ನಡುವಿನ ಹೊಂದಾಣಿಕೆಯೂ ಮುರಿದು ಬೀಳುವ ಹಂತ ತಲುಪಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೊಂದಿಗೆ ಮೈತ್ರಿ ವಿಚಾರವಾಗಿ ಸ್ಪಷ್ಟಪಡಿಸದ ಜೆಡಿಎಸ್, ಕಡೇ ಕ್ಷಣದಲ್ಲಿ ಏಕಾಂಗಿ ಸ್ಫರ್ಧೆಗೆ ನಿರ್ಧರಿಸಿತ್ತು. ಅದರಂತೆ ಚುನಾವಣೆ ದಿನದಂದು ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಹಾಗೂ ಬಿಜೆಪಿಯ ಸುನಂದ ಪಾಲನೇತ್ರ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿಜೆಪಿಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಕೈ ಸದಸ್ಯರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಪಾಲಿಕೆಯಲ್ಲಿ ಮೈತ್ರಿ ಉಳಿಸಿಕೊಂಡರು. ನಂತರದ ಬೆಳವಣಿಗೆಯಲ್ಲಿ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾದ ಕಾರಣ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ಜೆಡಿಎಸ್ ಒಪ್ಪಿದ್ದರಿಂದ ಹಿರಿಯ ಸದಸ್ಯೆ ಶಾಂತಕುಮಾರಿ ಅವರನ್ನು ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್‌ನಲ್ಲಿ ನಿರ್ಧಾರವಾಗಿತ್ತು. ಆದರೆ ಅವರದೇ ಪಕ್ಷದ ಸದಸ್ಯ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಚುನಾವಣೆಗೆ ತಡೆಬಿದ್ದಿತು. ಇದೀಗ ಮತ್ತೆ ಚುನಾವಣಾ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಅಧಿಕಾರಕ್ಕೆ ತಂತ್ರ ರೂಪಿಸಲಾಗುತ್ತಿದೆ. ಹಿಂದಿನ ಚುನಾವಣೆಯಲ್ಲಿ ವಿಫಲವಾಗಿದ್ದ ಸಚಿವ ಎಸ್.ಟಿ.ಸೋಮಶೇಖರ್ ಅವರು ಈ ಬಾರಿ ಯಶಸ್ವಿಯಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‌ನೊಂದಿಗೆ ಮೈತ್ರಿಯೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವ ರಣತಂತ್ರ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಪಕ್ಷಗಳ ಬಲಾಬಲ: ಶಾಸಕ ಜಿ.ಟಿ.ದೇವೇಗೌಡರು, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಹಾಗೂ ೧೭ ಕಾರ್ಪೊ ರೇಟರ್‌ಗಳು ಸೇರಿ ಜೆಡಿಎಸ್‌ನಲ್ಲಿ ೨೧, ಶಾಸಕ ತನ್ವೀರ್ ಸೇಠ್ ಹಾಗೂ ೧೯ ಕಾರ್ಪೊರೇಟರ್‌ಗಳು ಸೇರಿ ಕಾಂಗ್ರೆಸ್‌ನಲ್ಲಿ ೨೦, ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್‌ನಾಗೇಂದ್ರ ಹಾಗೂ ೨೨ ಕಾರ್ಪೊರೇಟರ್‌ಗಳು ಸೇರಿ ಬಿಜೆಪಿಯಲ್ಲಿ ೨೫ ಮತ ಬಲವಿದೆ. ಜೊತೆಗೆ ಮೂವರು ಪಕ್ಷೇತರರು, ಇಬ್ಬರು ಸ್ವತಂತ್ರ ಸದಸ್ಯರು ಹಾಗೂ ಓರ್ವ ಬಿಎಸ್‌ಪಿ ಸದಸ್ಯೆ ಸೇರಿ ಒಟ್ಟು ೭೨ ಮತದಾರರಿದ್ದಾರೆ.