ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡಿದರೆ ಹುಷಾರ್…

ಮೈಸೂರು: ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡಿಕೊಂಡು ಮೈಸೂರು ವಿಶ್ವವಿದ್ಯಾನಿಲಯದ ಘನತೆಗೆ ಧಕ್ಕೆ ಬರುವಂತೆ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡುವ ಅತಿಥಿ ಉಪನ್ಯಾಸಕರನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರನ್ನು ಯಾವುದೇ ಮುಲಾಜಿಲ್ಲದೇ ಮನೆಗೆ ಕಳುಹಿಸಲಾಗುವುದು ಎಂದು ಮೈಸೂರು ವಿವಿ ಕುಲ ಸಚಿವ (ಆಡಳಿತ) ಪ್ರೊ. ಆರ್.ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಕರ್ತವ್ಯದಲ್ಲಿ ವಿವಿಯ ನಿಯಮಗಳಿಗೆ ಬದ್ಧನಾಗಿ ನಡೆದುಕೊಂಡಿದ್ದೇನೆ. ಅತಿಥಿ ಉಪನ್ಯಾಸಕರ ನೇಮಕಾತಿಯೂ ನಿಯಮ ಬದ್ಧವಾಗಿಯೇ ನಡೆದಿದೆ. ಆದರೆ ಕೆಲಸ ದೊರೆಯದ ಅನರ್ಹರು ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡುತ್ತಾ ಮೈಸೂರು ವಿವಿಯ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.

ಏಕೆ ನಮಗೆ ಅತಿಥಿ ಉಪನ್ಯಾಸಕ ಹುದ್ದೆ ಕೊಡುವು ದಿಲ್ಲ? ಎಂದು ನನ್ನನ್ನು ಪ್ರಶ್ನೆ ಮಾಡಿದ್ದವರಿಗೆ ನಿಮ್ಮಂತಹ ಕೆಟ್ಟ ನಡವಳಿಕೆ ಹೊಂದಿರುವವರಿಗೆ ಕೆಲಸ ಕೊಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದೆ. ಅರ್ಹತೆ ಇಲ್ಲದವರಿಗೆ ಹಾಗೂ ನಡವಳಿಕೆ ಸರಿ ಇಲ್ಲದವರಿಗೆ ವಿವಿಯಲ್ಲಿ ಕೆಲಸ ಕೊಡುವು ದಿಲ್ಲ. ಎಷ್ಟೇ ಬುದ್ಧಿವಂತರಾದರೂ ವರ್ತನೆ ಸರಿಯಿಲ್ಲವಾದರೆ ಯಾವುದೇ ಕಾರಣಕ್ಕೂ ಅವರನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳಲ್ಲ ಎಂದು ತಿಳಿಸಿದರು.

ನಾಲ್ವರಿಂದ ಶೈಕ್ಷಣಿಕ ವಾತಾವರಣ ಹಾಳು: ನಾಲ್ವರು ಕೆಟ್ಟ ನಡವಳಿಕೆಯ ವ್ಯಕ್ತಿಗಳಿಂದ ವಿವಿಯ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ. ಆ ಮೂಲಕ ಮೈಸೂರು ವಿವಿಗೆ ಕಳಂಕ ತರಲು ಹೊರಟಿ ರುವ ಇಂತಹವರಿಗೆಲ್ಲಾ ನಾನು ಜಗ್ಗುವುದಿಲ್ಲ. ಈಗ 3ನೇ ಬಾರಿಗೆ ಕುಲಸಚಿವನಾಗಿದ್ದು, ನಾನೆಂದು ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಅರ್ಹತೆ ಇಲ್ಲದವರು ಅತಿಥಿ ಉಪನ್ಯಾಸಕ ಹುದ್ದೆಗೆ ನಾನಾ ರೀತಿಯಲ್ಲಿ ಶಿಫಾರಸ್ಸು ಮಾಡಿಕೊಂಡು ಬರು ತ್ತಾರೆ. ಹೀಗೆ ಬರುವವರು ಪಾಠ ಪ್ರವಚನದಲ್ಲಿ ತೊಡಗಿಕೊಳ್ಳದೇ ಇಡೀ ಶೈಕ್ಷಣಿಕ ವಾತಾವರಣ ವನ್ನೇ ಹದಗೆಡಿಸುತ್ತಾರೆ ಎಂದು ಆರೋಪಿಸಿದರು.

ನಾನು ರಾಜಣ್ಣನೇ ಅಲ್ಲ!: ಇದೇ ವೇಳೆ ವೇದಿಕೆಯಲ್ಲಿದ್ದ ಮಹಾರಾಜ ಕಾಲೇಜು ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದ ಪ್ರೊ.ಆರ್. ರಾಜಣ್ಣ, ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಕೆಲಸ ಮಾಡದೇ ಕಾಲಹರಣ ಮಾಡುತ್ತಾ, ಕುಲಪತಿಗಳು, ಕುಲಸಚಿವರು, ಪ್ರಾಂಶುಪಾಲರ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡಿಕೊಂಡು ರಾಜಕೀಯ ಮಾಡುವವರಿದ್ದರೆ ತಕ್ಷಣ ತಿಳಿಸಿ, ಅಂತಹವರನ್ನು ಆ ಕ್ಷಣವೇ ಕೆಲಸದಿಂದ ಬಿಡುಗಡೆಗೊಳಿಸದೇ ಹೋದರೆ ನಾನು ರಾಜಣ್ಣನೇ ಅಲ್ಲ ಎಂದು ಸಿಡಿಮಿಡಿಗೊಂಡರು.

ಕುಲಪತಿಗಳ ಅನುಮೋದನೆ ಇಲ್ಲದೇ ನಾನೇನು ಮಾಡಿಲ್ಲ. ಬೇಕಿದ್ದರೆ ಆರ್‍ಟಿಐ ಅಡಿ ಮಾಹಿತಿ ಪಡೆದುಕೊಳ್ಳಲಿ. ನಾನು ತಪ್ಪು ಮಾಡಿದ್ದರೆ ನನಗೆ ಈ ಹುದ್ದೆಯೇ ಬೇಡ. ನನಗೆ ಸುಳ್ಳು ಹೇಳುವುದಕ್ಕೆ ಬರುವುದಿಲ್ಲ ಎಂದರು.

ಎಬಿಸಿಡಿ ಬರೋಲ್ಲ: ಈ ಅತಿಥಿ ಉಪನ್ಯಾಸಕರಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟಸಾಧ್ಯ. ಕೆಲವರು ಒಳ್ಳೆಯವರೂ ಇದ್ದಾರೆ. ಇವರಿಗೆ ಎಬಿಸಿಡಿ ಬರೋಲ್ಲ, ಇಂತಹವರು ಅತಿಥಿ ಉಪನ್ಯಾಸಕರ ಹುದ್ದೆ ಕೊಡಿ ಎಂದು ಬರುತ್ತಾರೆ. ಗಾರೆ ಕೆಲಸ ಮಾಡುವವರೇ ದಿನಕ್ಕೆ ಸಾವಿರ ರೂ. ಸಂಪಾದನೆ ಮಾಡುತ್ತಾರೆ. ಹೀಗಿರುವಾಗ ವಿವಿಯಲ್ಲಿ ರಾಜಕೀಯ ಮಾಡಲು 8ರಿಂದ 12 ಸಾವಿರ ರೂ. ವೇತನ ದೊರೆಯುವ ಅತಿಥಿ ಉಪನ್ಯಾಸಕ ಹುದ್ದೆಗೆ ಬರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಂಡು ಐಎಎಸ್, ಕೆಎಎಸ್ ಪಾಸ್ ಮಾಡಲಿ. ಅದು ಬಿಟ್ಟು ಈ ಅತಿಥಿ ಉಪನ್ಯಾಸಕ ಹುದ್ದೆಗೇ ಇವರು ಅಂಟಿ ಕೊಳ್ಳುವುದೇಕೆ? ಎಂದು ಪ್ರಶ್ನಿಸಿದರು.

ರೋಲ್‍ಕಾಲ್ ಸಂಘಟನೆಗಳು: ನನ್ನ ವಿರುದ್ಧ ರೋಲ್‍ಕಾಲ್ ಸಂಘಟನೆಗಳು ಪ್ರತಿಭಟನೆ ಅಸ್ತ್ರ ಬಳಸು ತ್ತಿವೆ. ಒಬ್ಬರು ಫೋನ್ ಮಾಡಿ ಹಿಂದಿನ ಕುಲಸಚಿವರು ದುಡ್ಡು ಕೊಡುತ್ತಿದ್ದರು. ನೀವು ಕೊಡಿ ಎಂದು ಕೇಳಿದ್ದರು. ಇದಕ್ಕೆ ನಾನು ನಿರಾಕರಿಸಿದೆ ಎಂದು ಆರೋಪಿಸಿದರು.