ನ್ಯಾಕ್‍ನಲ್ಲಿ ಮೈಸೂರು ವಿವಿಗೆ ‘ಎ’ ಗ್ರೇಡ್

ಮೈಸೂರು, ಸೆ.20(ಆರ್‍ಕೆ)- ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ಓಂಂಅ) 4ನೇ ಆವೃತ್ತಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ‘ಎ’ ಗ್ರೇಡ್ ಪಡೆದುಕೊಂಡಿದೆ.

ಸೆಪ್ಟೆಂಬರ್ 15ರಿಂದ 17ರವರೆಗೆ ನ್ಯಾಕ್ ತಂಡ ಭೇಟಿ ನೀಡಿ, ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ವ್ಯವಸ್ಥೆ, ಸಂಶೋಧನೆ ಮತ್ತು ಪರೀಕ್ಷಾ ಪದ್ಧತಿಗಳ ಕುರಿತಂತೆ ಅಧ್ಯಯನ ಹಾಗೂ ಮೌಲ್ಯಾಂಕನ ಮಾಡಿದ್ದರು. ವಿವಿ ಅಧಿಕಾರಿಗಳು ಸಲ್ಲಿಸಿದ ವರದಿ ಆಧರಿಸಿ ನ್ಯಾಕ್ ಇಂದು ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟಿಸಿದ್ದು, ವಿಶ್ವವಿದ್ಯಾನಿಲಯಗಳ ಪೈಕಿ ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯವು ನ್ಯಾಕ್‍ನ 4ನೇ ಆವೃತ್ತಿಯಲ್ಲಿ ‘ಎ’ ಗ್ರೇಡ್ ಪಡೆದಿದೆ ಎಂದು ಕುಲಸಚಿವ ಪ್ರೊ. ಆರ್. ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾನ್ಯತೆಯು ಸೆ.20ರಿಂದ 5 ವರ್ಷಗಳ ಅವಧಿಗೆ ಮಾನ್ಯ ವಾಗಿರುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು ಸಿದ್ಧಪಡಿಸಿ ಪ್ರಸ್ತುತಪಡಿಸಿದ ಪವರ್ ಪಾಯಿಂಟ್ ಪ್ರೆಸೆಂಟೇಷನ್, ಗುಣಾತ್ಮಕ ಶಿಕ್ಷಣ ಪದ್ಧತಿ, ಸಂಶೋಧನೆ, ಬೋಧನಾ ಕ್ರಮ, ಒದಗಿಸಿರುವ ಮೂಲ ಸೌಕರ್ಯ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿ ಗಣಿಸಿ ನ್ಯಾಕ್ ‘ಎ’ ಗ್ರೇಡ್ ನೀಡಿದೆ ಎಂದು ಪ್ರೊ. ಶಿವಪ್ಪ ತಿಳಿಸಿದರು.