ಬುಡಕಟ್ಟು ಜನರ ಅಭಿವೃದ್ಧಿಗೆ ಮೈಸೂರು ವಿವಿ ಸಂಶೋಧನೆ

ಮೈಸೂರು,ಫೆ.25(ಆರ್‍ಕೆ)-ರಾಜ್ಯದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸಂಶೋಧನಾ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯವು ಕೈಗೆತ್ತಿಕೊಂಡಿದೆ. ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಪ್ರಾಯೋಜಕತ್ವದ `ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಜನರ ಮಾನವ ಅಭಿವೃದ್ಧಿ ಸೂಚ್ಯಂಕ ತಯಾರಿಕೆ’ ಕುರಿತ ಸಂಶೋಧನೆಯನ್ನು ಮೈಸೂರು ವಿವಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದಲ್ಲಿ ಆರಂಭಿಸಿದೆ ಎಂದು ಯೋಜನಾ ನಿರ್ದೇಶಕ ಡಾ.ಡಿ.ಸಿ.ನಂಜುಂಡ ತಿಳಿಸಿದ್ದಾರೆ.

ಎಸ್‍ಟಿ ಮೀಸಲಾತಿಗೆ ತೀವ್ರ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಮಹತ್ವ ಪಡೆಯಲಿದ್ದು, ಈ ಯೋಜನೆಗೆ ಕೇಂದ್ರ ಬುಡಕಟ್ಟು ಮಂತ್ರಾಲಯವು 30 ಲಕ್ಷ ರೂ. ಅನುದಾನ ನೀಡಿದೆ. 51 ಬುಡಕಟ್ಟು ಜನಾಂಗಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಅಧ್ಯಯನ ಮಾಡಿ ವರದಿ ತಯಾರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಅದಕ್ಕಾಗಿ 2,989 ಕುಟುಂಬಗಳ ಸಮೀಕ್ಷೆ ಮಾಡಲಾಗುವುದು. ಪ್ರಶ್ನಾವಳಿ ಮೂಲಕ ಬುಡಕಟ್ಟು ಜನಾಂಗಗಳ ಆರೋಗ್ಯ, ಶಿಕ್ಷಣ, ಉದ್ಯೋಗ, ಆದಾಯ, ಮೂಲಭೂತ ಸೌಲಭ್ಯ, ಶಿಶು ಮತ್ತು ಬಾಣಂತಿಯರ ಸಾವು, ಭೂ ಒತ್ತುವರಿ, ಲಿಂಗತ್ವ, ಅಂತರ್ಜಾಲ ಬಳಕೆ ಕುರಿತಂತೆ ಮಾಹಿತಿ ಸಂಗ್ರಹಿಸಿ ಜನಸಂಪರ್ಕ ಸಭೆಗಳ ಮೂಲಕ ದತ್ತಾಂಶ ಸಿದ್ಧಪಡಿಸಿದ ನಂತರ ಜಿಲ್ಲಾವಾರು ಮತ್ತು ಬುಡಕಟ್ಟುವಾರು ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಲಾಗುವುದು ಎಂದು ಡಾ.ಡಿ.ಸಿ.ನಂಜುಂಡ ತಿಳಿಸಿದರು.