ಸೈಕಲ್‍ನಲ್ಲಿ ದೇಶ ಸುತ್ತಿ ಶಾಂತಿ-ಸಾಮರಸ್ಯ ಸಂದೇಶ ಸಾರುತ್ತಿರುವ ನಾಗರಾಜಗೌಡ

ಮೈಸೂರು, ಮಾ.9(ಪಿಎಂ)- ಶಾಂತಿ-ಸಾಮರಸ್ಯ ಸಂದೇಶ ಸಾರಲು, ರಾಷ್ಟ್ರ ಪ್ರೇಮದ ಮಹತ್ವ ಪಸರಿ ಸಲು ಹಾಗೂ ಪರಿಸರ ಕಾಳಜಿಯ ಅಗತ್ಯತೆ ತಿಳಿಸಲು ಹಾಸನ ಮೂಲದ ವ್ಯಕ್ತಿಯೊಬ್ಬರು ಸೈಕಲ್‍ನಲ್ಲಿ ದೇಶ ಸಂಚಾರ ನಡೆಸುತ್ತಿದ್ದಾರೆ.

ಹೀಗೆ ದೇಶ ಸುತ್ತಿ, ಸಂದೇಶ ಸಾರಲು ಸೈಕಲ್ ತುಳಿಯುತ್ತಿರುವವರು ನಾಗರಾಜಗೌಡ. ಇವರು ಹಾಸನ ನಗರದ ಅಗರಬತ್ತಿ ವ್ಯಾಪಾರಿ ಮಲ್ಲೇಗೌಡರ ಪುತ್ರರು. ಇವರ ತಾಯಿ ಶಾರದಮ್ಮ. ಎಸ್‍ಎಸ್‍ಎಲ್‍ಸಿ ಓದಿರುವ ನಾಗರಾಜಗೌಡ ತಮ್ಮ ಈ ಸೈಕಲ್ ಯಾತ್ರೆ ಆರಂಭಿಸಿದ್ದು ಮುಂಬೈ ನಗರದಿಂದ. ಕರ್ನಾಟಕದ ಹಾಸನದ ಇವರು ಮುಂಬೈಯಿಂದ ಯಾತ್ರೆ ಆರಂಭಿಸಿದ್ದೇಕೆ? ಎಂಬ ಪ್ರಶ್ನೆ ಉದ್ಭವಿಸಬಹುದು.

ಮುಂಬೈನ ಚಲನಚಿತ್ರ ರಂಗದಲ್ಲಿ ಸಣ್ಣಪುಟ್ಟ ಪಾತ್ರ ಗಳನ್ನು ಮಾಡುತ್ತಿದ್ದ ನಾಗರಾಜಗೌಡ, 2017ರ ಡಿ.3 ರಂದು ಇಲ್ಲಿಂದಲೇ ತಮ್ಮ ಯಾತ್ರೆ ಪ್ರಾರಂಭಿಸಿದರು. ಇವರ ಯಾತ್ರೆಯಷ್ಟೇ ಸಂದೇಶ ವಿಷಯಗಳು ವಿಶಾಲ. ಹೌದು, ವಿಶ್ವ ಶಾಂತಿ, ಕೋಮು ಸೌಹಾರ್ದತೆ, ನೀರು ಉಳಿಸಿ, ಗಿಡ-ಮರ ಬೆಳೆಸಿ, ದೇಶಭಕ್ತಿ, ವಿವಿಧತೆಯಲ್ಲಿ ಏಕತೆಯ ಭಾವದ ಮಹತ್ವ ಹೀಗೆ, ಇವರ ಸಂದೇಶದ ಸಾಲುಗಳು ಬೆಳೆಯುತ್ತ ಸಾಗುತ್ತವೆ.

ಇದೀಗ ಮೈಸೂರಿಗೆ ಭೇಟಿ ಕೊಟ್ಟಿರುವ ಇವರು ತಮ್ಮ ವಿಶಿಷ್ಟ ಹಾವ ಭಾವ, ವೇಷಭೂಷಣದಿಂದ ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಹೀಗೆ ಗಮನ ಸೆಳೆಯುತ್ತಲೇ ಸಂದೇಶಗಳನ್ನು ಪಸರಿಸುತ್ತಿದ್ದಾರೆ ನಾಗರಾಜಗೌಡ. ಗುಜರಾತ್, ರಾಜಾಸ್ತಾನ್, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ್, ಉತ್ತರಾಖಂಡ್, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ತಮ್ಮ ಸುದೀರ್ಘ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಈಗ ಮೈಸೂರಿಗೆ ಬಂದಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ನಾಗರಾಜ ಗೌಡ, ಬೆಳಿಗ್ಗೆ 8ರಿಂದ ಸಂಜೆ 6.30ರವರೆಗೆ ಪ್ರಯಾಣ ಬೆಳೆಸುತ್ತೇನೆ. ಈ ಅವಧಿಯಲ್ಲಿ ದಿನಕ್ಕೆ 80ರಿಂದ 100 ಕಿ.ಮೀ. ಕ್ರಮಿಸುತ್ತೇನೆ. ರಾತ್ರಿ ವೇಳೆ ಮಂದಿರ, ಆಶ್ರಮ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳಲ್ಲಿ ಆಶ್ರಯ ಪಡೆಯುತ್ತೇನೆ. ಸೈಕಲ್‍ನಲ್ಲಿ ಒಂದು ಹುಂಡಿ ಕಟ್ಟಿದ್ದು, ಅನೇಕ ಸಾರ್ವಜನಿಕರು ಸಹಾಯಾ ರ್ಥವಾಗಿ ಅದಕ್ಕೆ ಹಣ ಹಾಕುತ್ತಾರೆ ಎಂದರು.

ಹೀಗೆ ಪ್ರಯಾಣ ಮಾಡುವಾಗ ಕೇವಲ ಸಾರ್ವಜನಿ ಕರ ಗಮನ ಮಾತ್ರ ಸೆಳೆಯುತ್ತಿಲ್ಲ. ಆಯಾಯ ಪ್ರದೇಶದ ಗಣ್ಯರನ್ನು ಭೇಟಿ ಮಾಡಿ ನನ್ನ ಉದ್ದೇಶ ತಿಳಿಸುತ್ತೇನೆ. ಈವರೆಗೆ ಭೇಟಿ ಮಾಡಿದ ಎಲ್ಲಾ ಗಣ್ಯರು ನನ್ನ ಕಾರ್ಯ ಮೆಚ್ಚಿ ಬೆನ್ನು ತಟ್ಟಿ ಕಳುಹಿಸಿದ್ದಾರೆ. ದೆಹಲಿಯಲ್ಲಿ ಸಿಎಂ ಕೇಜ್ರೀವಾಲ್, ಉತ್ತರ ಪ್ರದೇಶದಲ್ಲಿ ಅಲ್ಲಿನ ಮಾಜಿ ಸಿಎಂ ಅಖಿಲೇಶ್ ಯಾದವ್, ಮಧ್ಯಪ್ರದೇಶದ ಸಿಎಂ ಕಮಲನಾಥ್ ಸಿಂಗ್, ಗಾಂಧಿ ವಾದಿ ಎಸ್.ಎನ್.ಸುಬ್ಬ ರಾವ್ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಿದಾಗ ಪ್ರೋತ್ಸಾಹದ ಮಾತುಗಳನ್ನಾಡಿದರು ಎಂದು ವಿವರಿಸಿದರು. ಇದೀಗ ಮೈಸೂರಿನಲ್ಲಿ ಭಾನುವಾರ ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. ಅವರು ಆಶೀರ್ವದಿಸಿ ಉತ್ತೇಜನ ನೀಡಿದರು. 12 ರಾಜ್ಯದಲ್ಲಿ ಸಂಚರಿಸಿದ್ದು, ಕರ್ನಾಟಕ 13ನೇ ರಾಜ್ಯವಾಗಿದೆ. ಮಂಡ್ಯ, ಬೆಂಗಳೂರು ಮಾರ್ಗದ ಮೂಲಕ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿ ಪಶ್ಚಿಮ ಬಂಗಾಳದತ್ತ ಸಂಚರಿಸಲು ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳು ತ್ತಿದ್ದೇನೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಬಲ್ಲೆ ಎನ್ನುವ ಮಧ್ಯಮ ವಯಸ್ಕರಾದ ನಾಗರಾಜಗೌಡ, ತಾವು ಬ್ರಹ್ಮಚಾರಿ ಎಂದು ತಿಳಿಸಿದರು.