ಮೈಸೂರಿಂದ ಕುಶಾಲನಗರದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಹಣ ಬಿಡುಗಡೆ

ಬೆಂಗಳೂರು, ಫೆ.8 (ಕೆಎಂಶಿ)- ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವಮಟ್ಟದ ದರ್ಜೆಗೆ ಪರಿವರ್ತಿಸುತ್ತಿದ್ದಂತೆ ಮೈಸೂರಿನಿಂದ ಕುಶಾಲ ನಗರದವರೆಗಿನ ಹೆದ್ದಾರಿ ಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನು ದಾನ ಬಿಡುಗಡೆ ಮಾಡಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆಗಳ ಮಹಾಪೂರ ವನ್ನೇ ಹರಿಸುತ್ತಿದ್ದು, ಇಂದು ಮೂರು ಸಾವಿರ ಕೋಟಿ ರೂ. ಮೊತ್ತದ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಹಣ ಬಿಡುಗಡೆ ಮಾಡಿದೆ. ಚುನಾವಣೆಗೂ ಮುನ್ನವೇ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಬಹುತೇಕ ಮಾರ್ಚ್ ಮಧ್ಯೆ ಭಾಗ ದಲ್ಲಿ ಪ್ರಧಾನಿ ಮೋದಿ ಅವರು ಈ ರಸ್ತೆ ಯನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಶೇಕಡ 90ರಷ್ಟು ಕಾಮಗಾರಿಗಳು ಪೂರ್ಣ ಗೊಂಡಿವೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಮೈಸೂರಿನಿಂದ ಕುಶಾಲ ನಗರದವರೆಗಿನ ರಾಷ್ಟ್ರೀಯ ಹೆದ್ದಾರಿ 275 ಗುಡ್ಡೆ ಹೊಸೂರು ಬಳಿ ನಾಲ್ಕು ಪಥ ರಸ್ತೆ ಅಗಲೀಕರಣ ಯೋಜನೆಗೆ 909.86 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‍ನಲ್ಲಿ ಹೆದ್ದಾರಿ ಇಲಾಖೆಗೆ ಬಹಳಷ್ಟು ಅನುದಾನ ನೀಡಲಾಗಿದ್ದು, ಇದರಲ್ಲಿ ಕರ್ನಾಟಕದ ಪ್ರಮುಖ ಹೆದ್ದಾರಿ ಯೋಜನೆಗಳಿಗೂ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ಜಿಲ್ಲೆ ಇಲವಾಲ, ಕೆಆರ್ ನಗರ ಜಂಕ್ಷನ್ ರಸ್ತೆಯಲ್ಲಿ ನಾಲ್ಕು ಪಥ ರಸ್ತೆ ನಿರ್ಮಾಣ ಯೋಜನೆಗೆ 739.39 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಬಿಜಾಪುರದ ಮಹಾರಾಷ್ಟ್ರ ಗಡಿಭಾಗದ ಕನಮಡಿ-ಬಿಜ್ಜರಗಿ-ತಿಕೋಟ ಸೆಕ್ಷನ್‍ನಲ್ಲಿ ದ್ವಿಪಥ ರಸ್ತೆಯ ಅಗಲೀಕರಣಕ್ಕೆ 196 ಕೋಟಿ ರೂ. ಅನುದಾನ ನೀಡಿದ್ದಾರೆ.

ಕೇಂದ್ರ ಭೂಸಾರಿಗೆ ಸಚಿವರ ನಿರ್ಧಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವುದಲ್ಲದೆ, ವಿಶ್ವದರ್ಜೆಯ ಸೌಕರ್ಯ ಕಲ್ಪಿಸುತ್ತಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ವಿಜಯಪುರ ಕಲಬುರಗಿಯ ಮಹಾರಾಷ್ಟ್ರ ಗಡಿಭಾಗದ ರಾಹೆ-548ಬಿಗೆ ಸೇರುವ ಮುರುಂನಿಂದ ಐಬಿ ಸರ್ಕಲ್‍ವರೆಗಿನ ದ್ವಿಪಥ ರಸ್ತೆಯ ಅಗಲೀಕರಣ ಯೋಜನೆ: 957.09 ಕೋಟಿ ರೂ. ಕೊಪ್ಪಳ ಮತ್ತು ಗದಗ್‍ನಲ್ಲಿ ರಾಹೆ-367ರ ಗಡ್ಡನಕೇರಿ ಸೆಕ್ಷನ್‍ನಲ್ಲಿ ಕುಕುನೂರ, ಯಲಬುರ್ಗ, ಗಜೇಂದ್ರಗಡದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ: 333.96 ಕೋಟಿ ರೂ. ಬಾಗಲಕೋಟೆ ಜಿಲ್ಲೆ ರಾಹೆ-367: ಸರ್ಜಾಪುರದಿಂದ ಪಟ್ಟದಕಲ್ಲು ರಸ್ತೆ ಅಗಲೀಕರಣ ಯೋಜನೆ: 445.62 ಕೋಟಿ ರೂ. ಒದಗಿಸಲಾಗಿದೆ.