ಸರ್ಕಾರ ಯಾವುದೇ ಬರಲಿ ಮೈಸೂರು ಅಭಿವೃದ್ಧಿಯಾಗಲಿ

ಮೈಸೂರು, ಮೇ 31 (ಸಿಎನ್)- ಸರ್ಕಾರಗಳು ಬದಲಾವಣೆಯಾಗುವುದು ಪ್ರಜಾಪ್ರಭುತ್ವದಲ್ಲಿ ಒಂದು ಪ್ರಕ್ರಿಯೆ, ಆದರೆ ಅಭಿವೃದ್ಧಿ ಕಾರ್ಯಗಳು ನಿರಂತರ. ಸರ್ಕಾರ ಯಾವುದೇ ಇರಲಿ, ಮೈಸೂರು ಸಮಗ್ರ ಅಭಿವೃದ್ಧಿಯಾಗಲಿ ಎಂದು ನರೇಡ್ಕೋ ಮೈಸೂರು ಘಟಕದ ಅಧ್ಯಕ್ಷ ಆದಿ ಶೇಷನಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಖಾಸಗಿ ಹೋಟೆಲ್‍ನಲ್ಲಿ ನರೆಡ್ಕೋ ಮೈಸೂರು ಘಟಕದಿಂದ ಆಯೋಜಿಸಲಾಗಿದ್ದ ಮಾಸಿಕ ಸಭೆ ಯಲ್ಲಿ ‘ಬ್ರಾಂಡ್ ಮೈಸೂರು ಯೋಜನೆ 2ನೇ ಆವೃತ್ತಿ’ ಕುರಿತು ತಂತ್ರಜ್ಞಾನದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗ ಳೂರಿನಲ್ಲಿ ಅರ್ಧ ಪ್ರಮಾಣದಲ್ಲಿ ಹೊರವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣವಾಗಿದೆ. ಆದರೆ ನಮ್ಮ ಮೈಸೂರಿನಲ್ಲಿ ಪೂರ್ಣ ಪ್ರಮಾಣವಾಗಿ ಹೊರವರ್ತುಲ ರಸ್ತೆ ನಿರ್ಮಾಣವಾಗಿದೆ. ಇದು ಮೈಸೂರಿಗರು ಹೆಮ್ಮೆಪಡುವ ವಿಚಾರ. ಉತ್ತಮ ದೃಷ್ಟಿಕೋನದಿಂದ ಮೈಸೂರು ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನರೆಡ್ಕೋ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆÀ ‘ಬ್ರಾಂಡ್ ಮೈಸೂರು’ ಮೂಲಕ ಮೈಸೂ ರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರವಿತ್ತು, ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಯಾವುದೇ ಸರ್ಕಾರ ಬರಲಿ ಬಿಡಲಿ, ಅಧಿಕಾರದಲ್ಲಿ ಯಾರೇ ಇರಲಿ ನಾವು ಮೈಸೂರಿನ ಅಭಿವೃದ್ಧಿ ಬಗ್ಗೆ ಪ್ರಬಲ ಒತ್ತಡ ಹೇರ ಬೇಕಾಗಿದೆ. ನಮ್ಮ ಸಂಸ್ಥೆಯಲ್ಲಿ ಬಿಲ್ಡರ್ಸ್, ಡೆವಲ ಪರ್ಸ್, ತಾಂತ್ರಿಕ ವರ್ಗ ಹೀಗೆ ಹಲವು ಪ್ರಮುಖ ವಿಭಾಗದ ಜನರಿದ್ದೇವೆ. ನಾವೆಲ್ಲರೂ ಒಂದೊಳ್ಳೆ ಯೋಜನೆ ಮೂಲಕ ಸರ್ಕಾರದ ಗಮನ ಸೆಳೆದು ಮೈಸೂರಿನ ಪ್ರಗತಿಗೆ ಟೊಂಕಕಟ್ಟಿ ನಿಲ್ಲಬೇಕಾದ ಅಗತ್ಯವಿದೆ ಎಂದು ಹೇಳಿದರು.
ಬೆಂಗಳೂರು ಇಲ್ಲಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ಹಾಗಾಗಿ ಬೆಂಗಳೂರಿನ ರೀತಿ ಮೈಸೂರು ಕೂಡ ಬೆಳವಣಿಗೆ ಹೊಂದುವ ಕ್ಷಮತೆಯಿದೆ. ಜೊತೆಗೆ ನಮ್ಮ ಸಂಸ್ಥೆ ಕೂಡ ಸಾಥ್ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ, ಸಿಎಂಓ ಅನುಮತಿ ಪಡೆದ ಕೂಡಲೇ ಕಾರ್ಯೋನ್ಮುಖರಾಗುತ್ತೇವೆ. ಮೈಸೂರಿನ ಸರ್ವತೋಮುಖ ಬೆಳವಣÉಗೆಗೆ ನಾವು ಮುನ್ನುಗ್ಗಲು ಸಿದ್ಧರಿದ್ದೇವೆ ಎಂದರು.
ಪ್ರಧಾನಿ ಮೋದಿ ಪರಿಚಯಿಸಿದ ಮೇಕ್ ಇನ್ ಇಂಡಿಯಾ ಯೋಜನೆಯಿಂದ ದೇಶ ಸ್ವಾವಲಂಬಿ ಯಾಗಿ ಆರ್ಥಿಕ ಪರಿಸ್ಥಿತಿ ಹಾಗೂ ವಿದೇಶ ವಿನಿಮಯ ಹೆಚ್ಚಾಗಿದೆ. ಅಲ್ಲದೇ ಜಿಡಿಪಿ 10% ತಲುಪಿದೆ, ಜಿಎಸ್‍ಟಿ ಮೂಲಕ ತೆರಿಗೆದಾರರ ಸಂಖ್ಯೆ ಹೆಚ್ಚಾ ಗಿದೆ. ಈಗಾಗಲೇ 4 ಟ್ರಿಲಿಯನ್ ಡಾಲರ್ ಸಮೀಪ ದಲ್ಲಿದ್ದೇವೆ, ಇನ್ನು ಕೆಲವೇ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ 5 ಟ್ರಿಲಿಯನ್ ಡಾಲರ್ ಎಕಾನಾಮಿ ಕನಸು ನನಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ರಿಂಗ್ ರಸ್ತೆಯ ವ್ಯಾಪ್ತಿಯಲ್ಲಿ 8 ಯೋಜನೆಗಳ ನೀಲನಕ್ಷೆ ರೂಪಿಸಿದ್ದೇವೆ. ಪ್ರವಾ ಸೋದ್ಯಮ, ಕೈಗಾರಿಕೋದ್ಯಮ, ಅರೆವಾಹಕ, ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಹೆಚ್ಚು ಒತ್ತು ನೀಡಿ, ಸರ್ಕಾ ರಕ್ಕೆ ಹಾಗೂ ಮೈಸೂರಿನ ಪ್ರಗತಿಗೆ ಸಹಕಾರಿಯಾದ ಜನಸ್ನೇಹಿ ಯೋಜನೆ ರೂಪಿಸಿದ್ದೇವೆ. ನಮ್ಮ ಯೋಜನೆ ಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮನವರಿಕೆ ಮಾಡುತ್ತೇವೆ. ಅವರೂ ಮೈಸೂರಿನವರೇ ಆದ್ದರಿಂದ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು.

ಮೊದಲ ಅವಧಿಯಲ್ಲಿ ಆದಿಶೇಷನಗೌಡ ತಂತ್ರ ಜ್ಞಾನ ಮಾಹಿತಿ, ಎರಡನೇ ಅವಧಿಯಲ್ಲಿ ವಿವಿಧ ವಿಭಾಗದ ನುರಿತ ತಜ್ಞರು ಸಂವಾದ ನಡೆಸಿ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಿಆರ್‍ಡಿಐ ಅಧ್ಯಕ್ಷ ಶ್ರೀ ಹರಿ ದ್ವಾರಕನಾಥ್, ನರೆಡ್ಕೋ ಮೈಸೂರು ಉಪಾಧ್ಯಕ್ಷ ವಿ.ಸಿ.ರವಿಕುಮಾರ್, ಕಾರ್ಯದರ್ಶಿ ಎಂ.ಎಲ್.ನಾಗೇಂದ್ರ, ನರೆಡ್ಕೋ ಜಂಟಿ ಕಾರ್ಯ ದರ್ಶಿ ಸುಧೀಂದ್ರ ಜಿ.ಕೆ ಮತ್ತಿತರರು ಹಾಜರಿದ್ದರು.