ಯಾರೇ ಅಭ್ಯರ್ಥಿಯಾಗಲಿ ಬಿಜೆಪಿ ಶಾಸಕರ ಸಂಕಲ್ಪ ತೊಡಿ

ಮೈಸೂರು, ಫೆ.23(ಎಸ್‍ಬಿಡಿ)-ಬಿಜೆಪಿಯಲ್ಲಿ ಬೆಂಬಲಿ ಗರ ತೋರಿಸಿ ಟಿಕೆಟ್ ಪಡೆಯುವುದು ಅಸಾಧ್ಯ. ಅಭ್ಯರ್ಥಿ ಯಾರೇ ಆದರೂ ನಮ್ಮ ಕ್ಷೇತ್ರಕ್ಕೆ ಬಿಜೆಪಿ ಶಾಸಕರು ಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬಿಜೆಪಿ ಮೈಸೂರು ಮಹಾನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಇನ್ನು 70 ದಿನಗಳಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯೇ ಮುಗಿಯಬಹುದು. ಈ ಸಂದರ್ಭದಲ್ಲಿ ನಮ್ಮ ಶಕ್ತಿಯ ಬಗ್ಗೆ ಸಂಶಯ ಇರಬಾರದು. ನನಗೆ ಅಥವಾ ನಾನು ಹೇಳಿದವರಿಗೇ ಟಿಕೆಟ್ ನೀಡಬೇಕೆಂಬ ನಿಲುವಿನಿಂದ ಹೊರಬರಬೇಕು. ಜನ ತೋರಿಸಿ ಬಿಜೆಪಿ ಟಿಕೆಟ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇರುವವರ ನಿಂದಿಸಬೇಡಿ: ಕೃಷ್ಣರಾಜ ಕ್ಷೇತ್ರದಲ್ಲಿ ಎಸ್.ಎ.ರಾಮದಾಸ್, ಚಾಮರಾಜ ಕ್ಷೇತ್ರದಲ್ಲಿ ಎಲ್.ನಾಗೇಂದ್ರ ಶಾಸಕರಾಗಿದ್ದಾರೆ. ಹೀಗೆ ಹಾಲಿ ಶಾಸಕರು ಮಾತ್ರವಲ್ಲದೆ ಟಿಕೆಟ್ ಕೇಳಲು ಬೇರೆಯವರಿಗೂ ಅವಕಾಶವಿದೆ. ಅದಕ್ಕಾಗಿ ಅವರು ಓಡಾಡಲೂಬಹುದು. ಅಂತಹವರು ತಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ. ಅದನ್ನು ಬಿಟ್ಟು ಹಾಲಿ ಶಾಸಕರಾಗಿರುವವರ ಬಗ್ಗೆ ಕೆಟ್ಟದ್ದನ್ನು ಹೇಳಬೇಡಿ. ಇರುವವರನ್ನು ಕಳ್ಳ-ಸುಳ್ಳ ಎಂದೆಲ್ಲಾ ಹೇಳಲು ಹೋಗ ಬೇಡಿ. ಮೋದಿ ಅವರು ವಡೋದರದಲ್ಲಿ 4.5 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರೂ. ಅದು ಸುರಕ್ಷಿತ ಕ್ಷೇತ್ರವಾಗಿದ್ದರೂ ಮುಂದಿನ ಚುನಾವಣೆಗೆ ವಾರಣಾಸಿಗೆ ಹೋದರು. ಅವರೆಂದೂ ಪ್ರತಿಸ್ಪರ್ಧಿಗಳ ಬಗ್ಗೆ ಹಿಂದಿರುಗಿ ನೋಡಿದವರಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಹಿಂದಿರುಗಿ ನೋಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿ, ಬಹುಮತದ ಹೊಸ್ತಿಲಲ್ಲಿ ನಿಂತಿದ್ದ ಉದಾಹರಣೆ ಇದೆ. ಹಾಗಾಗಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕರ್ತರೇ ನಿರ್ಣಾಯಕ: ಬಿಜೆಪಿ ಮತ್ತೆ ಸರಿಯಾದ ಲಯ, ಶೃತಿ ಹಿಡಿದು ಯಶಸ್ಸಿನತ್ತ ದೃಢವಾದ ಹೆಜ್ಜೆ ಹಾಕುತ್ತಿದೆ. ಟಿಕೆಟ್ ಕೇಳಲು ಯಾರು ಎಲ್ಲಾದರೂ ಹೋಗಲಿ. ಯಾರಿಗೇ ಟಿಕೆಟ್ ಸಿಗಲಿ. ಒಟ್ಟಾರೆ ನಮ್ಮ ಪಕ್ಷದವರೇ ಶಾಸಕರಾಗಿ ಆಯ್ಕೆಯಾಗಬೇಕು. ಇದರಲ್ಲಿ ಸಂಸದರು, ಶಾಸಕರು, ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಇದೆ. ಆದರೂ ಕಾರ್ಯಕರ್ತರೇ ನಿರ್ಣಾಯಕ ಎನ್ನುವುದನ್ನು ಮರೆಯಬಾರದು. ರಾಜ್ಯದಲ್ಲಿ ಪ್ರಮುಖರಿಲ್ಲದ ಸಂದರ್ಭದಲ್ಲೂ ಮೈಸೂರಿನಲ್ಲಿ ಬಿಜೆಪಿ ಗೆದ್ದಿದೆ. ಪಕ್ಷದ ಚಿಹ್ನೆ ನೋಡಿಕೊಂಡು ಶ್ರಮಿಸಿರುವ ಉದಾಹರಣೆ ಇದೆ. 2018ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಅಭ್ಯರ್ಥಿ ಕಣದಿಂದ ನಿವೃತ್ತಿ ಘೋಷಿಸಿದ ಸಂದಿಗ್ಧ ಪರಿಸ್ಥಿತಿ ಯಲ್ಲೂ ಅಲ್ಲಿನ ಕೆಲ ಕಾರ್ಯಕರ್ತರು ವಿಚಲಿತರಾಗದೆ ಕೆಲಸ ಮಾಡಿದ್ದರು. ಬಿಜೆಪಿ ಗೆಲ್ಲುವುದು ಕಾರ್ಯಕರ್ತರಿಂದ ಪ್ರಮುಖರ ಕಾರಣದಿಂದಲ್ಲ ಎಂದರು.

ಪಕ್ಷ ಸೇರ್ಪಡೆ ಚಳವಳಿ: ಧರ್ಮೇಂದ್ರ ಪ್ರಧಾನ್ ಮತ್ತು ಅಣ್ಣಾಮಲೈ ಚುನಾವಣೆ ಉಸ್ತುವಾರಿಗಳಾಗಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಮತ್ತು ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಗೃಹಮಂತ್ರಿಗಳೂ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಚುನಾವಣೆ ವೇಳೆ ಪದೇ ಪದೆ ರಾಜ್ಯಕ್ಕೆ ಬರುತ್ತಾರೆಂದು ಪ್ರತಿಪಕ್ಷದವರು ಟೀಕಿಸುತ್ತಾರೆ. ಹೌದು ಮೋದಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಚುನಾವಣೆ ಸಂದರ್ಭ ಹಾಗೂ ಬೇರೆ ಸಮಯದಲ್ಲೂ ಬರುತ್ತಾರೆ. ದೇಶದ ಅಭಿವೃದ್ಧಿ ಆಶಯದಿಂದ ಅವರು ಪ್ರವಾಸ ಮಾಡುತ್ತಾರೆ. ಕೆಲವರು ಬೇರೆ ಕಾರಣಕ್ಕೆ ವಿದೇಶಕ್ಕೆ ಹೋಗುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್‍ಗಿಂತ ಹಿಂದೆ ಉಳಿಯುವ ಪರಿಸ್ಥಿತಿ ಬಿಜೆಪಿಗಿಲ್ಲ. ನಿಮ್ಮ ಮನೆ ಮೇಲಿರುವ ಪಕ್ಷದ ಬಾವುಟ ಚುನಾವಣೆ ಫಲಿತಾಂಶದವರೆಗೂ ತೆಗೆಯಬೇಡಿ. ಪ್ರತಿ ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಕ್ಷ ಸೇರ್ಪಡೆಯನ್ನು ಚಳವಳಿ ರೀತಿಯಲ್ಲಿ ನಡೆಸಿ ಎಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಬಿಜೆಪಿ ನಗರಾಧ್ಯP್ಷÀ ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ತುಳಸಿ ಮುನಿರಾಜುಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ಬಿಜೆಪಿ ರಾಜ್ಯ ಉಪಾಧ್ಯP್ಷÀ ಎಂ.ರಾಜೇಂದ್ರ, ಮಾಜಿ ಎಂಎಲ್‍ಸಿ ತೋಂಟದಾರ್ಯ, ಮುಖಂಡರಾದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮೈ.ವಿ.ರವಿಶಂಕರ್, ಹಿರೇಂದ್ರ ಶಾ, ಅಶ್ವತ್ಥ್ ನಾರಾಯಣ, ದೇವನೂರು ಪ್ರತಾಪ್ ಮತ್ತಿತರರಿದ್ದರು. ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕರಾದ ಭಾರತೀ ಶಂಕರ್, ಸಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.