ದಸರಾ ಗಜಪಡೆಗೆ ಇನ್ನು ಮುಂದೆ ಸಂಜೆ ವೇಳೆ ಭಾರ ಹೊರುವ ತಾಲೀಮು

ಮೊದಲ ಹಂತದಲ್ಲಿ ನಡೆದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲಾ ಐದು ಗಂಡಾನೆಗಳು ನಿರೀಕ್ಷೆಗೂ ಮೀರಿ ಸಾಮಥ್ರ್ಯ ಪ್ರದರ್ಶಿಸಿವೆ. ಇಂದಿನಿಂದ ಎರಡನೇ ಹಂತದ ತಾಲೀಮು ಆರಂ ಭಿಸಲಾಗಿದೆ. ಮೊದಲು 300 ಕೆಜಿ ಮರಳಿನ ಮೂಟೆ ಹೊರಿಸಲಾಗಿತ್ತು. ಇಂದಿನಿಂದ 510 ಕೆಜಿ ಮರಳಿನ ಮೂಟೆ ಹೊರಿಸಲಾಗಿದೆ. ಮೂರನೇ ಹಂತದಲ್ಲಿ 700 ಕೆಜಿ ಹೊರಿಸಲಾಗುತ್ತದೆ. ಸಂಜೆ ವೇಳೆ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸುವುದರಿಂದ ಜಂಬೂಸವಾರಿಯಲ್ಲಿ ಆನೆಗಳು ಸಹಜವಾಗಿ ಭಾರ ಹೊರಲು ಸಹಕಾರಿಯಾಗಲಿದೆ. ಅಲ್ಲದೆ, ಸಂಜೆ ವಾತಾವರಣದಲ್ಲಿ, ವಾಹನಗಳ ಲೈಟಿಂಗ್, ಬೀದಿ ದೀಪದ ಬೆಳಕಲ್ಲಿ ಆನೆಗಳಿಗೆ ತಾಲೀಮು ನಡೆಸುವುದು ಜಂಬೂಸವಾರಿ ದೃಷ್ಟಿಯಿಂದ ಅವಶ್ಯವಾಗಿದೆ. -ಡಾ.ವಿ.ಕರಿಕಾಳನ್, ಡಿಸಿಎಫ್
ಮೈಸೂರು, ಆ.23(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಗೆ ಮಂಗಳವಾರದಿಂದ 2ನೇ ಹಂತದ ಭಾರ ಹೊರುವ ತಾಲೀಮು ಆರಂಭಿಸಲಾಗಿದೆ. ಸಂಜೆ ವೇಳೆ ಅಭಿ ಮನ್ಯುವಿಗೆ 760 ಕೆಜಿ ಭಾರ ಹೊರಿಸಿ, ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ತಾಲೀಮು ನಡೆಸಲಾಯಿತು. ಮೊದಲ ದಿನವೇ ನಿರಾಳ ವಾಗಿ ಹೆಜ್ಜೆ ಹಾಕಿ, ಅಭಿಮನ್ಯು ಅರಣ್ಯಾ ಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಿದ್ದಾನೆ.

ಆ.10ರಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗೆ ಆ.18ರಿಂದ ಪ್ರತಿದಿನ ಬೆಳಗ್ಗೆ ಭಾರ ಹೊರಿಸುವ ತಾಲೀಮು ಆರಂಭಿಸಲಾಗಿತ್ತು. ಗಜಪಡೆಯ ನಾಲ್ಕು ಆನೆಗಳಿಗೆ 300 ಕೆಜಿ ಮರಳಿನ ಮೂಟೆ, 200 ಕೆಜಿ ತೂಕದ ಗಾದಿ, ನಮ್ದಾ ಸೇರಿ ದಂತೆ 500ರಿಂದ 550 ಕೆಜಿ ಭಾರ ಹೊರಿಸಿ ತಾಲೀಮು ನಡೆಸಲಾಗಿತ್ತು. ಹಿರಿಯ ಸದಸ್ಯ ಅರ್ಜುನನ ಹೊರತುಪಡಿಸಿ ಉಳಿದ 5 ಗಂಡಾನೆಗಳಿಗೆ ರೊಟೇಷನ್ ಪದ್ಧತಿಯಲ್ಲಿ ಭಾರ ಹೊರಿಸಿ ಯಶಸ್ವಿಯಾಗಿ ತಾಲೀಮು ನಡೆಸಲಾಗಿತ್ತು.

ಸಂಜೆಗೆ ಶಿಫ್ಟ್: ಜಂಬೂಸವಾರಿಗೆ ಗಜ ಪಡೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂದಿನಿಂದ ಭಾರ ಹೊರಿಸುವ ತಾಲೀ ಮನ್ನು ಬೆಳಗ್ಗೆಯಿಂದ ಸಂಜೆಗೆ ಶಿಫ್ಟ್ ಮಾಡ ಲಾಗಿದೆ. ಇನ್ನು ಮುಂದೆ ಭಾರ ಹೊರಿ ಸುವ ತಾಲೀಮನ್ನು ಸಂಜೆ ವೇಳೆ ಮುಂದು ವರೆಸಲಾಗುತ್ತದೆ. ಸಂಜೆ 4.15ಕ್ಕೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಸಮೀಪ ಅಭಿಮನ್ಯು ಮೇಲೆ ಗಾದಿ, ನಮ್ದಾ ಕಟ್ಟಿ, ಅದರ ಮೇಲೆ ತೊಟ್ಟಿಲು ಕಟ್ಟಿ 510 ಕೆಜಿ ಮರಳಿನ ಮೂಟೆ ಇರಿಸ ಲಾಯಿತು. ನಂತರ ಬಲರಾಮ ದ್ವಾರ ದಿಂದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಬಂಬೂಬಜಾರ್ ವೃತ್ತ, ಹೈವೆ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾ ಯತು ಮೈದಾನ ತಲುಪಿತು. 5 ಕಿಮಿ ಅಂತರವನ್ನು 1.15 ನಿಮಿಷದಲ್ಲಿ ತಲುಪಿ, ಪ್ರಶಂಸೆಗೆ ಪಾತ್ರವಾಯಿತು. ಇಂದು ನಡೆದ ತಾಲೀಮಿನಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್, ಆರ್‍ಎಫ್‍ಓ ಸಂತೋಷ್ ಹೂಗಾರ್, ಪಶು ವೈದ್ಯ ಡಾ.ಮುಜೀಬ್, ಸಹಾಯಕರಾದ ರಂಗರಾಜು, ಅಕ್ರಮ್ ಇನ್ನಿತರರು ಪಾಲ್ಗೊಂಡು ಆನೆಗಳ ಸಾಮಥ್ರ್ಯ ಗಮನಿಸಿದರು.