ಸರ್ಕಾರದ ಮಾರ್ಗಸೂಚಿ ಪಾಲಿಸಲು ಸೂಚನೆ

ಹುಣಸೂರು, ಏ.26(ಕೆಕೆ)- ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಯನ್ನು ಅನುಸರಿಸಲು ಎಚ್ಚರಿಕೆ ನೀಡುತ್ತಿ ದ್ದರೂ ಸಾರ್ವಜನಿಕರು ಸರಿಯಾಗಿ ಪಾಲಿಸುತ್ತಿಲ್ಲ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.

ಪಟ್ಟಣದ ನಗರಸಭಾ ಸಭಾಂಗಣದಲ್ಲಿ ಕರೆಯಲಾಗಿದ್ದ ಹೊಟೇಲ್ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳು, ಅಂಗಡಿ ಹಾಗೂ ಬೇಕರಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ನೀವುಗಳೇ ಸರಿಯಾಗಿ ಸರ್ಕಾ ರದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಇನ್ನು ಗ್ರಾಹಕರನ್ನು ಹೇಗೆ ನಿಬಾಯಿಸು ತ್ತಿರಾ? ಮೊದಲು ನೀವು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ನಂತರ ನಿಮ್ಮ ಬಳಿ ಬರುವ ಗ್ರಾಹಕರಿಗೆ ಕೋವಿಡ್‍ನ ಮಾರ್ಗಸೂಚಿಗಳನ್ನು ಹೇಳಬಹುದು ಎಂದರು.

ಮಾಸ್ಕ್‍ಗಳನ್ನು ಕಡ್ಡಾಯವಾಗಿ ಹಾಕ ಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಹೊಟೇಲ್‍ಗಳಲ್ಲಿ ಕಡ್ಡಾಯವಾಗಿ ಬಿಸಿ ನೀರು ನೀಡಬೇಕು. ಅಂಗಡಿ ಮತ್ತು ಹೊಟೇಲ್‍ಗಳಿಗೆ ಬರುವ ಗ್ರಾಹಕರಿಗೆ ಕೋವಿಡ್ ಟೆಸ್ಟ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಹಾಕಿಸಿ ಕೊಳ್ಳಲು ಹೇಳಿ. ಇಲ್ಲದಿದ್ದರೆ ನಮ್ಮ ಬಳಿ ಬರಬೇಡಿ ಎಂದು ಹೇಳಿ ಕಳುಹಿಸಿ ಎಂದರು.

ಕಳೆದ ಎರಡು ಸಭೆಗಳಲ್ಲಿಯೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ. ಆದರೂ ಬಹುತೇಕ ಜನರು ಮಾರ್ಗ ಸೂಚಿಗಳನ್ನುಅನುಸರಿಸುತ್ತಿಲ್ಲ.

ನಗರಸಭೆ ಯಿಂದ ಕಾರ್ಯಾಚರಣೆ ಇಂದಿನಿಂದಲೇ ಪ್ರಾರಂಭವಾಗಲಿದೆ. ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಂಗಡಿಗಳನ್ನು ಮುಚ್ಚಿಸ ಲಾಗುವುದು ಮತ್ತು ಲೈಸೆನ್ಸ್ ರದ್ದುಗೊಳಿಸಲಾಗುವುದು. ಈವರೆಗೆ ಯಾರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿಲ್ಲ ಹಾಗೂ ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲ ಅಂತಹವರಿಗೆ ನೋಟೀಸ್ ನೀಡಿ ಬಂದ್ ಮಾಡಿಸಿ ಎಂದರು.

ನಗರಸಭೆ ಆಯುಕ್ತ ರಮೇಶ್, ನಗರ ಸಭೆ ಪರಿಸರ ಇಂಜಿನಿಯರ್ ರೂಪಾ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್ ರೈ, ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು.