ಒಂದೆಡೆ ಜಂಬೂಸವಾರಿ ವೀಕ್ಷಿಸಲು ಜನ ಪರದಾಡಿದರೆ, ಇತ್ತ ಟ್ಯಾಕ್ಸಿಗಳಾಗಿದ್ದ ಜನಪ್ರತಿನಿಧಿಗಳ ವಾಹನಗಳು

ಮೈಸೂರು,ಅ.15(ಎಂಕೆ)- ಕೊರೊನಾ ಹಿನ್ನೆಲೆ 2ನೇ ಬಾರಿಯೂ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ವೀಕ್ಷಣೆಗೆ ಸಾರ್ವಜನಿಕರು ಪರ ದಾಡಿದ್ದು ಕಂಡು ಬಂದಿತು.

ಅರಮನೆಯ ಕರಿಕಲ್ಲು ತೊಟ್ಟಿ ಗೇಟ್ ಬಳಿ ಜಮಾಯಿಸಿದ ಸಾವಿರಾರು ಮಂದಿ ಪ್ರವೇಶಕ್ಕೆ ಅವಕಾಶ ನೀಡು ವಂತೆ ಪೊಲೀಸರೊಂದಿಗೆ ಮಾತಿ ಗಿಳಿದರು. ಮಧ್ಯಾಹ್ನವಾಗುತ್ತಿದ್ದರಿಂದ ಅರಮನೆ ಆವರಣಕ್ಕೆ ಏಕೈಕ ಪ್ರವೇಶ ದ್ವಾರವಾಗಿದ್ದ ಕರಿಕಲ್ಲುತೊಟ್ಟಿ ಗೇಟ್ ಬಳಿ ತಂಡೋಪತಂಡವಾಗಿ ಬರಲಾ ರಂಭಿಸಿದ ಜನರು ಜಂಬೂ ಸವಾರಿ ನೋಡಲು ಪರದಾಡಿದರು.

ಈ ವೇಳೆ ಹಲವು ಮಂದಿ ನಾವು ಅವ ರಿವರ ಕಡೆಯವರು ಎಂದು ಹೇಳಿಕೊಂಡು ಪ್ರವೇಶ ಪಡೆದರೆ, ಒಳಗಡೆ ಹೋಗು ತ್ತಿದ್ದವರನ್ನು ನೋಡಿ ಅಲ್ಲಿ ನಿಂತಿದ್ದವರು ಕೂಡ ಅವರೊಂದಿಗೆ ನುಗ್ಗಲು ಯತ್ನಿಸಿ ದರೂ ಪೊಲೀಸರು ಬಿಡಲಿಲ್ಲ. ಇದರಿಂದ ಬೇಸರಗೊಂಡವರು ಕೊರೊನಾದಿಂದಾಗಿ ಕಡಿಮೆ ಜನರಿಗೆ ಅವಕಾಶ ಮಾಡಿಕೊಡ ಲಾಗಿದೆ. ಮುಂದಿನ ವರ್ಷವಾದರೂ ಅವಕಾಶ ದೊರಕಲಿ ಎಂದು ತಮ್ಮ ತಮ್ಮ ಮನೆಗೆ ವಾಪಸ್ಸಾದರು.
ಕಾರಲ್ಲೇ ಬಂದರು ಸಾವಿರ ಮಂದಿ: ಜಂಬೂ ಸವಾರಿ ನೋಡಲು ನಡೆದುಕೊಂಡು ಬಂದರೆ ಅವಕಾಶ ಸಿಗುವುದು ಕಷ್ಟ ಎಂಬು ದನ್ನು ಅರಿತ ಹಲವರು ವಿಐಪಿ ಕಾರು ಗಳನ್ನು ಬಳಸಿಕೊಂಡ ಪ್ರಸಂಗ ನಡೆ ಯಿತು. ಸಹಕಾರ ಸಂಘಗಳ ನಿರ್ದೇಶಕ ರಿಂದ ಹಿಡಿದು ರಾಜಕೀಯ ಮುಖಂಡರ ಕಾರುಗಳು ಮೂರ್ನಾಲ್ಕು ಬಾರಿ ಅರಮನೆ ಒಳಗಿನಿಂದ ಹೊರಗೆ ಹಾಗೂ ಹೊರಗಿ ನಿಂದ ಒಳಗೆ ಸಂಚರಿಸಿದವು. ಪ್ರತೀ ಬಾರಿಯೂ 5-10 ಜನರನ್ನು ಕಾರಿನಲ್ಲಿ ಅರಮನೆ ಆವರಣಕ್ಕೆ ತಂದು ಬಿಡುತ್ತಿದ್ದ ದೃಶ್ಯ ಕಂಡು ಬಂದಿತು.

ಪೊಲೀಸ್ ಸಿಬ್ಬಂದಿ, ಅರಮನೆಯಲ್ಲಿ ಕೆಲಸ ಮಾಡುವವರು, ಜನಪ್ರತಿನಿಧಿಗಳ ಸಂಬಂಧಿಕರೆಂದು ಹೇಳಿಕೊಂಡು ಹಲವರು ಪ್ರವೇಶ ಪಡೆದರು. ಈ ವೇಳೆ ಮತ್ತೆಲ್ಲಿ ನಮ್ಮನ್ನು ವಾಪಸ್ ಕಳುಹಿಸಿ ಬಿಡುತ್ತಾರೋ ಎಂದು ಓಡಿದ ಘಟನೆ ಗಳು ನಡೆದವು.

ಪೊಲೀಸರ ಹರಸಾಹಸ: ಜಂಬೂ ಸವಾರಿ ವೀಕ್ಷಣೆಗೆ ಮುಗಿಬಿದ್ದ ಜನರನ್ನು ತಡೆದು ವಾಪಸ್ ಕಳುಹಿಸಲು ಪೊಲೀ ಸರು ಹರಸಾಹಸಪಡಬೇಕಾಯಿತು. ಕರಿಕಲ್ಲುತೊಟ್ಟಿ ಗೇಟ್‍ಬಳಿ ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್ ಸುರೇಶ್ ಕುಮಾರ್, ಎನ್.ಆರ್.ಸಂಚಾರ ಪೊಲೀಸ್ ಇನ್ಸ್‍ಸ್ಪೆಕ್ಟರ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಜನರನ್ನು ನಿಯಂ ತ್ರಿಸುವಲ್ಲಿ ಹೈರಾಣಾದರು.