ಸೋಂಕಿನ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಕೋವಿಡ್ ಪರೀಕ್ಷೆ ಪ್ರಮಾಣದಲ್ಲೂ ಏರಿಕೆ

ಮೈಸೂರು,ಜ.25(ಎಂಟಿವೈ)-ಕೊರೊನಾ ಸೋಂಕಿನ ತೀವ್ರ ಹೆಚ್ಚಳದಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇದೀಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೈಸೂರು ನಗರ 18 ಸೇರಿದಂತೆ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರತಿದಿನ 6ರಿಂದ 7 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

ತಾಂತ್ರಿಕ ಸಲಹಾ ಸಮಿತಿ ವರದಿ ಅನುಸಾರ ಜ.20ರಿಂದಲೇ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡಿದೆ. ಇದರಿಂದ ಈ ಹಿಂದೆ 2 ರಿಂದ 3 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಕಳೆದ 1 ವಾರದಿಂದ 6ರಿಂದ 8 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ.

ಕಳೆದ 1 ವಾರದಿಂದ ಚಳಿ ಹಾಗೂ ಇಬ್ಬನಿ ಹೆಚ್ಚಾಗಿರುವುದರಿಂದ ವೈರಲ್ ಜ್ವರ ಪ್ರಕರಣ ಹೆಚ್ಚಾಗಿದೆ. ಇದರಿಂದ ಭಯಗೊಂಡಿರುವ ಜನರು ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟುತ್ತಿದೆ.
ಕೋವಿಡ್ ಪರೀಕ್ಷಾ ಸ್ಥಳಗಳು: ಕೆ.ಆರ್.ಆಸ್ಪತ್ರೆ ಹಾಗೂ ಬಿ.ಡಿ.ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆ 5.30ರವರೆಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ನಾಚನಹಳ್ಳಿ ಪಾಳ್ಯ(ಪಿಹೆಚ್‍ಸಿ), ಗಿರಿಯಾಬೋವಿ ಪಾಳ್ಯ, ಎನ್.ಆರ್.ಮೊಹಲ್ಲಾ, ಅಶೋಕಪುರಂ, ಮೈಸೂರು ಅರಮನೆ ಆವರಣ, ಪುರಭವನ, ನಜರ್‍ಬಾದ್, ಕುಂಬಾರಕೊಪ್ಪಲು, ರಾಜೇಂದ್ರನಗರ, ಜಯನಗರ, ಬನ್ನಿಮಂಟಪ, ಚಾಮುಂಡಿಪುರಂ, ವಿ.ವಿ.ಪುರಂ, ಈರನಗೆರೆ, ಕುವೆಂಪುನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆ ಯಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಕೋವಿಡ್ ಪರೀಕ್ಷೆ ನಡೆಯಲಿದೆ. ಇನ್ನು ತಾಲೂಕು ಕೇಂದ್ರಗಳಲ್ಲೂ ತಲಾ 4 ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ.