ಹೊಸ ವರ್ಷದ ಮೊದಲ ದಿನ ಎಲ್ಲೆಡೆ ದೇವರ ಮೊರೆ ಹೋದ ಜನತೆ

ಮೈಸೂರು, ಜ.1(ಆರ್‍ಕೆ)- ಇಂದು ಹೊಸ ವರ್ಷ. 2021 ಕಳೆದು 2022ಕ್ಕೆ ಸ್ವಾಗತ ಕೋರುವ ಸಂಭ್ರಮ. ಈ ಶುಭ ದಿನದಂದು ಸಾವಿರಾರು ಜನರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರಿಂದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ತುಂಬಿತ್ತು. ಮೈಸೂರಿನ ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮತ್ತು ನಂಜನಗೂಡಿನ ನಂಜುಂಡೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಸ್ಥಾನ ಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕಾಲಿ ಡಲು ಜಾಗವಿಲ್ಲದಷ್ಟು ಭಕ್ತರು ತುಂಬಿ ದ್ದರು. ಹೊಸ ವರ್ಷವನ್ನು ದೇವರ ದರುಶನದ ಮೂಲಕ ಬರಮಾಡಿಕೊಳ್ಳಲು ಮುಂದಾ ಗಿದ್ದುದು ಕಂಡುಬಂದಿತು. ಕೋವಿಡ್ 3ನೇ ಅಲೆ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಫ್ರ್ಯೂ ಜಾರಿಯಲ್ಲಿರುವ ಕಾರಣ, ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಇದರಿಂದ ಕೆಲವು ಕಡೆ ಮೊದಲೇ ನಿಗದಿ ಮಾಡಿಕೊಂಡಿದ್ದ ಸ್ಥಳಗಳಲ್ಲಿ ಕದ್ದು-ಮುಚ್ಚಿ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದ ಜನರು, ಬೆಳಗ್ಗೆ ದೇವಸ್ಥಾನ ದತ್ತ ಮುಖ ಮಾಡಿದ್ದರು. ಇಂದು ಬೆಳಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿದ ಭಕ್ತರು, ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದು, ಹೊಸ ವರ್ಷದಲ್ಲಿ ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿ ಮರಳಿ ಬಾರದಿರಲಿ, ಸರ್ವರಿಗೂ ಆರೋಗ್ಯ, ಆಯಸ್ಸು, ನೆಮ್ಮದಿ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಇಂದು ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ನೂಕು-ನುಗ್ಗಲು ತಡೆಯಲೆಂದೇ 300 ರೂ. ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತಾದರೂ, ಧರ್ಮ ದರ್ಶನ ಸೇರಿದಂತೆ ಎಲ್ಲೆಡೆ ಭಕ್ತರು ನೂಕು-ನುಗ್ಗಲಿನಲ್ಲಿ ದೇವರ ದರ್ಶನ ಮಾಡಿ ಪ್ರಾರ್ಥಿಸಿ, ಹರಕೆ ಮಾಡಿಕೊಳ್ಳುತ್ತಿದ್ದುದು ಕಂಡು ಬಂದಿತು.
ಹೊಸ ವರ್ಷದ ಮೊದಲ ದಿನವಾದ್ದರಿಂದ ಮೈಸೂರಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರೂ ಸಹ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಕೋವಿಡ್-19 ಮಾರ್ಗಸೂಚಿಯನ್ನೂ ಲೆಕ್ಕಿಸದೆ ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ಒಮ್ಮೆಲೇ ಸಾವಿರಾರು ಮಂದಿ ದಾವಿಸಿದ್ದರಿಂದ ಪೊಲೀಸರು ಗುಂಪು ಗುಂಪಾಗಿ ಬಂದ ಭಕ್ತರು ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಗುವಂತೆ ಮನವೊಲಿಸಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಹಿಷಾಸುರ ಪ್ರತಿಮೆ ಆವರಣದಿಂದ ದೇವಸ್ಥಾನದವರೆಗೂ ಭಕ್ತರ ದಂಡೇ ನೆರೆದಿತ್ತು. ವಾಹನಗಳ ಸಂಖ್ಯೆಯೂ ಜಾಸ್ತಿಯಾಗಿದ್ದರಿಂದ ಬೆಟ್ಟದಲ್ಲಿ ನಿಲುಗಡೆಗೆ ಸ್ಥಳಾವಕಾಶವಿಲ್ಲದೇ ಪರದಾಡುವಂತಾಯಿತು. ಧರ್ಮದರ್ಶನ, 30 ರೂ., 100 ರೂ. ವಿಶೇಷ ದರ್ಶನದ ಜೊತೆಗೆ 300 ರೂ. ವಿಶೇಷ ದರ್ಶನ ಟಿಕೆಟ್ ನಿಗದಿ ಮಾಡಿದರು. ಭಕ್ತಾದಿಗಳು ದೇವರ ದರ್ಶನಕ್ಕೆ ಮುಗಿಬೀಳುತ್ತಿದ್ದರು.

ಚಾಮುಂಡಿಬೆಟ್ಟದ ತಪ್ಪಲಿನ ಉತ್ತನಹಳ್ಳಿಯ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ಗಣಪತಿ ಸಚ್ಚಿದಾನಂದ ಆಶ್ರಮದ ವೆಂಕಟರಮಮಣಸ್ವಾಮಿ ದೇವಸ್ಥಾನ, ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ, ಗಣಪತಿ, ಈಶ್ವರ ದೇವಸ್ಥಾನ, ಅಗ್ರಹಾರದ ಗಣಪತಿ ದೇವಸ್ಥಾನ, ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನ, ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನ, ವಿವಿ ಮೊಹಲ್ಲಾದ ಚಂದ್ರಮೌಳೇಶ್ವರ ದೇವಸ್ಥಾನ, ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನ, ಹೆಬ್ಬಾಳಿನ ಅನ್ನಪೂರ್ಣೇಶ್ವರಿ ದೇವಾಲಯ, ಕುಂಬಾರಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನ, ಪಡುವಾರಹಳ್ಳಿಯ ಮಲೆಮಹದೇಶ್ವರ ದೇವಸ್ಥಾನ, ಕೆ.ಜಿ.ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಮೈಸೂರು ನಗರದ ಎಲ್ಲಾ ದೇವಾಲಯಗಳಲ್ಲೂ ಭಕ್ತರ ದಂಡೇ ನೆರೆದಿತ್ತು. ಅದೇ ರೀತಿ ನಂಜನಗೂಡಿನ ಶ್ರೀಕಂಠೇಶ್ವರ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಗಂಜಾಂನ ನಿಮಿಷಾಂಬ, ಮೇಲುಕೋಟೆಯ ಚೆಲುವನಾರಾಯಣಸ್ವಾಮಿ, ಕರಿಘಟ್ಟದ ಶ್ರೀರಂಗನಾಥಸ್ವಾಮಿ ದೇವಸ್ಥಾನಗಳಲ್ಲೂ ಇಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದುದು ಕಂಡು ಬಂದಿತು. ರಾಘವೇಂದ್ರ ಮಠಗಳು, ಸಾಯಿ ಮಂದಿರ, ಇಸ್ಕಾನ್ ದೇವಾಲಯಗಳಲ್ಲೂ ಇಂದು ವಿಶೇಷ ಪೂಜೆ, ಅರ್ಚನೆ ನಡೆದವು.