ಒಮ್ಮೆ ಆರೋಗ್ಯ ಹಾಳಾದರೆ, ಇಡೀ ಜೀವನವೇ ಹಾಳು

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯ ಅಧ್ಯಾಪಕೇತರ ಉದ್ಯೋಗಿಗಳ ಸಂಘ, ಲಯನ್ಸ್ ಕ್ಲಬ್ ಆಫ್ ಮೈಸೂರ್ ಚಂದನ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಮೈಸೂರು ವಿವಿ ಕ್ರಾಫರ್ಡ್ ಭವನದ ಕೆಳಮಹಡಿಯಲ್ಲಿ ಬುಧವಾರ ಉಚಿತ ಕಣ್ಣು ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮೈಸೂರು ವಿವಿ ಅಧ್ಯಾಪಕೇತರ ಉದ್ಯೋಗಿಗಳ ಕಣ್ಣು ಮತ್ತು ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕೂ ಮುನ್ನ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಆಯಿಷಾ ಎಂ.ಶರೀಫ್ ದೀಪ ಬೆಳಗಿಸಿ, ತಮ್ಮ ಕಣ್ಣು ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದು ಸಾಕಷ್ಟು ಜನ ಕೆಲಸದ ಒತ್ತಡದ ನಡುವೆ ತಮ್ಮ ಆರೋಗ್ಯದ ಕಡೆ ಗಮನ ನೀಡುತ್ತಿಲ್ಲ. ಆರೋಗ್ಯ ಹಾಳಾದರೆ, ಇಡೀ ಜೀವನವೇ ಹಾಳಾಗುತ್ತದೆ. ಆದ್ದರಿಂದ ನೌಕರರು ಕೆಲಸದ ನಡುವೆ ತಮ್ಮ ಆರೋಗ್ಯದ ಕಡೆಯೂ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಡಾ.ರೇಣುಕಾಪ್ರಸಾದ್ ಮಾತನಾಡಿ, ಮಧುಮೇಹ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚಲು ನಮ್ಮ ಆಹಾರ ಕ್ರಮವೇ ಕಾರಣ. ವೈದ್ಯರ ಸೂಕ್ತ ಮಾರ್ಗದರ್ಶನ, ಸಲಹೆ, ಚಿಕಿತ್ಸೆ ಪಡೆದರೆ ಮಧುಮೇಹವನ್ನು ಆರಂಭಿಕ ಹಂತದಿಂದಲೇ ತಡೆಗಟ್ಟಬಹುದು. ಆಹಾರ ಕ್ರಮ, ವ್ಯಾಯಾಮ, ಯೋಗ, ಮಾನಸಿಕ ಸ್ಥಿರತೆ ಇದ್ದರೆ ಮಧು ಮೇಹದಿಂದ ದೂರ ಇರಬಹುದು ಎಂದರು.

ಈ ಸಂದರ್ಭದಲ್ಲಿ ಕುಲಸಚಿವ ಡಾ.ಆರ್.ರಾಜಣ್ಣ, ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ನಾಗರಾಜ ಬೈರಿ, ಪ್ರಾದೇಶಿಕ ಅಧ್ಯಕ್ಷ ಎಸ್.ಸುರೇಶ್‍ಬಾಬು, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಡಾ.ಅಶ್ವಥ್ ಕುಮಾರ್, ಡಾ. ರೇಣುಕಾ ಪ್ರಸನ್ನ, ಲಯನ್ಸ್ ಕ್ಲಬ್ ಆಫ್ ಮೈಸೂರು ಚಂದನದ ಅಧ್ಯಕ್ಷ ಡಾ. ಚಂದ್ರಶೇಖರ್, ಹೇಮಕುಮಾರ್, ರಾಮಕೃಷ್ಣೇಗೌಡ, ಮೈಸೂರು ವಿವಿ ಅಧ್ಯಾಪಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷ ಹರೀಶ್‍ಬಾಬು ಇನ್ನಿತರರು ಉಪಸ್ಥಿತರಿದ್ದರು.