ದೊಡ್ಡರಸಿನಕೆರೆಯಲ್ಲಿ ಕ್ಯಾತಮ್ಮ ದೇವಿ ಹಬ್ಬಕ್ಕೆ ತೆರೆ

ಭಾರತೀನಗರ, ಆ.13(ಅ.ಸತೀಶ್)- ಇಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ 12 ವರ್ಷಗಳ ನಂತರ ಬಹಳ ವಿಜೃಂಭಣೆಯಿಂದ ನಡೆದ ಶ್ರೀ ಕ್ಯಾತಮ್ಮದೇವಿ ಪೂಜಾ ಮಹೋತ್ಸವಕ್ಕೆ ಗುರುವಾರ ರಾತ್ರಿ ತೆರೆಬಿದ್ದಿತು.

ಶ್ರೀ ಕ್ಯಾತಮ್ಮದೇವಿಯ ಪೂಜಾ ಮಹೋತ್ಸವದ ಅಂಗವಾಗಿ ಇಡೀ ಗ್ರಾಮದ ರಸ್ತೆಗಳು ಹಾಗೂ ಎಲ್ಲಾ ದೇವಾಲಯಕ್ಕೆ ವಿಶೇಷ ವಾಗಿ ದೀಪಾಲಂಕಾರ ಮಾಡಲಾಗಿತ್ತು. ಮೂರು ದಿನಗಳೂ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪೂಜಾ ಮಹೋತ್ಸವದಲ್ಲಿ ಸಾವಿರಾರು ಮಹಿಳೆಯರು ಭಾಗ ವಹಿಸಿ ಹಣ್ಣೆಡಿಗೆ ಹೊತ್ತು, ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಹೆಬ್ಬಾಳದಿಂದ ಸುಮಾರು 4 ಕಿ.ಮೀ. ದೂರ ನಡೆದು ದೊಡ್ಡರಸಿನಕೆರೆ ತಲುಪಿದರು.

12 ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬದಲ್ಲಿ ಗ್ರಾಮದ ಹೆಣ್ಣು ಮಕ್ಕಳು, ಸೊಸೆಯಂದಿರು ಒಗ್ಗೂಡಿ ಹಬ್ಬ ಮಾಡುವುದು ಈ ಹಬ್ಬದ ವಿಶೇಷತೆ. ಈ ಹಬ್ಬಕ್ಕೆ ವೃದ್ಧಾಪ್ಯ ವಯಸ್ಸಿನ ಗ್ರಾಮದ ಮಹಿಳೆಯರು ಭಾಗವಹಿಸಿದ್ದು ಇಲ್ಲಿನ ವಿಶೇಷವಾಗಿತ್ತು. ನಂತರ ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಹಲವು ಜನಪದ ಕಲಾತಂಡ ಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮೆರುಗು ತಂದವು.