ಕಾರ್ಖಾನೆಯ ಖಾಸಗೀಕರಣ ಹುನ್ನಾರ ವಿರೋಧಿಸಿ ಇಂದಿನಿಂದ ಬೆಮೆಲ್ ನೌಕರರ ಪ್ರತಿಭಟನೆ

ಮೈಸೂರು, ಫೆ.14(ಆರ್‍ಕೆಬಿ)- ಸರ್ಕಾರಿ ವಲಯದ ಬಿಇಎಂಎಲ್ ಕಾರ್ಖಾನೆಯ ಶೇ.26ರಷ್ಟು ಷೇರನ್ನು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಕಾರ್ಖಾನೆ ಅಸ್ತಿತ್ವಕ್ಕೆ ಧಕ್ಕೆ ತರಲು ಕೇಂದ್ರ ಸರ್ಕಾರ ಹೊರಟಿದೆ. ಹೀಗಾಗಿ ಈ ರೀತಿಯ ಯಾವುದೇ ಕ್ರಮ ಕೈಗೊಳ್ಳಲು ಬಿಡುವುದಿಲ್ಲ ಎಂದು ಕಾರ್ಖಾನೆ ಕಾರ್ಮಿಕರ ಸಂಘ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ವೈ. ಮುನಿರೆಡ್ಡಿ, ಕಾರ್ಖಾನೆಯ ಶೇ.26ರಷ್ಟು ಷೇರನ್ನು ಖಾಸಗಿ ಯವರಿಗೆ ಮಾರಾಟ ಮಾಡಲು ಇ ಬಿಡ್ಡಿಂಗ್‍ಗೆ ಸೂಚನೆ ನೀಡಿದ್ದು, ಇದರಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಕಂಪನಿ ಪಾಲ್ಗೊಳ್ಳಬಾರದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಹೀಗಾಗಿ ಇದು ಕಾರ್ಖಾನೆಯನ್ನು ಸಂಪೂರ್ಣವಾಗಿ ಖಾಸಗಿಯವರ ಆಡಳಿತಕ್ಕೆ ನೀಡುವ ಹುನ್ನಾರವಾಗಿದೆ. ಈ ರೀತಿ ಮಾಡಿದಲ್ಲಿ ರಕ್ಷಣಾ ಕ್ಷೇತ್ರ, ಮೆಟ್ರೋ ಕೋಚ್ ಮೊದಲಾದವನ್ನು ಒದಗಿಸುತ್ತಿರುವ ಕಂಪನಿ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಆದ್ದರಿಂದ ಈ ರೀತಿಯ ಯಾವುದೇ ಕ್ರಮಕ್ಕೆ ತಮ್ಮ ಸಂಘ ಬಿಡುವುದಿಲ್ಲ. ಇದರ ಭಾಗವಾಗಿ ಫೆ.15ರಿಂದ 20ರವರೆಗೆ ನಗರದಲ್ಲಿನ ಕಾರ್ಖಾನೆ ಎದುರು ಪ್ರತಿಭಟನೆ ನಡೆಯಲಿದೆ. ಅದಕ್ಕೂ ಕೇಂದ್ರ ಸರ್ಕಾರ ಜಗ್ಗದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ, ಬೆಂಗಳೂರು ಚಲೋ, ರಾಜಭವನ ಚಲೋ ಮೊದಲಾದ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಎಂ.ಡಿ.ರಾಜಶೇಖರ ಮೂರ್ತಿ ಮಾತನಾಡಿ, ಬೆಂಗಳೂರು, ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್ ಮೊದಲಾದ ಘಟಕಗಳಲ್ಲಿ ಸುಮಾರು 13 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಒಂದು ವೇಳೆ ಖಾಸಗಿಯವರ ಆಡಳಿತಕ್ಕೆ ಬಿಟ್ಟಲ್ಲಿ ಇದರ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಜೊತೆಗೆ ದೇಶದ ರಕ್ಷಣಾ ವಲಯಕ್ಕೂ ಉತ್ಪನ್ನ ಸರಬರಾಜು ಮಾಡುತ್ತಿರುವ ಹಿನ್ನೆಲೆಯಲ್ಲಿ ಅವುಗಳ ರಹಸ್ಯ ಇತರ ಶತ್ರು ದೇಶಗಳ ಪಾಲಾಗುವ ಆತಂಕವಿದೆ ಎಂದರು. ಕಾರ್ಖಾನೆ ಖಾಸಗಿಯವರಿಗೆ ಹೋದಲ್ಲಿ ಮೀಸಲಾತಿ ಪ್ರಕ್ರಿಯೆ ಸಹ ನಿಂತು ಹೋಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿ ಗಳಾದ ಸುರೇಶ್, ಗೋವಿಂದರೆಡ್ಡಿ, ಜಗದೀಶ್ ಇದ್ದರು.