ಶೇ.67.79 ಶಾಂತಿಯುತ ಮತದಾನ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ಯಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನವಾಗಿದ್ದು, ಒಟ್ಟಾರೆ ಶೇ.67.79 ರಷ್ಟು ಮತ ಚಲಾವಣೆಯಾಗಿದೆ. ಅಬ್ಬರದ ಪ್ರಚಾರ, ನಂತರ ಈಗ ಮತದಾನ ಮುಗಿಸಿ ನಿಟ್ಟುಸಿರು ಬಿಟ್ಟಿರುವ ಅಭ್ಯರ್ಥಿ ಗಳು ಫಲಿತಾಂಶಕ್ಕಾಗಿ ಬರೋಬ್ಬರಿ 35 ದಿನಗಳ ಕಾಲ ಕಾಯಬೇಕಿದೆ. ಪ್ರಚಾರಕ್ಕೆ ಕೇವಲ 15 ದಿನಗಳು ದೊರೆತರೆ, ಫಲಿತಾಂಶಕ್ಕೆ ಹಲವು ದಿನ ಎದುರು ನೋಡಬೇಕಾದ ಪರಿಸ್ಥಿತಿ ಕಣದಲ್ಲಿರುವ 241 ಅಭ್ಯರ್ಥಿಗಳಿಗೆ ಎದುರಾಗಿದೆ.

ಇದೇ ಮೊದಲ ಬಾರಿಗೆ 14 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ನೇರ ಹಣಾಹಣಿ ನಡೆಸಿದ್ದಾರೆ. ಮೊದಲ ಹಂತದಲ್ಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಸದಾನಂದ ಗೌಡ, ರಾಜ್ಯದ ಪಂಚಾಯತ್ ರಾಜ್ ಸಚಿವ ಕೃಷ್ಣಾಬೈರೇ ಗೌಡ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯಿಲಿ, ಚಿತ್ರನಟಿ ಸುಮಲತಾ ಅಂಬರೀಶ, ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್, ಹಾಲಿ ಸಂಸದರಾದ ಶೋಭಾ ಕರಂದ್ಲಾಜೆ, ಡಿ.ಕೆ.ಸುರೇಶ್, ಪಿ.ಸಿ.ಮೋಹನ್, ಕೆ.ಹೆಚ್. ಮುನಿಯಪ್ಪ, ಆರ್.ಧ್ರುವನಾರಾಯಣ್, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್, ಚಂದ್ರಪ್ಪ, ಮಾಜಿ ಸಂಸದರಾದ ಸಿ.ಹೆಚ್.ವಿಜಯಶಂಕರ್, ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಕಣದಲ್ಲಿದ್ದಾರೆ. ಇವರು ತಮ್ಮ ಫಲಿತಾಂಶಕ್ಕೆ ಮೇ 23ರವರೆಗೂ ಕಾಯಬೇಕಾಗಿದೆ. ರಾಷ್ಟ್ರದಲ್ಲಿ ನಡೆಯುತ್ತಿರುವ ವಿವಿಧ ಹಂತಗಳ ಚುನಾವಣೆ ಪೂರ್ಣಗೊಂಡ ನಂತರ ಒಂದೇ ದಿನ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂಜಾನೆ 7 ಗಂಟೆಯಿಂದ ಮತದಾನ ಆರಂಭಗೊಂಡರೂ, ಬಿರುಸುತನ ಕಾಣಲಿಲ್ಲ. ಕರಾವಳಿ ಮತ್ತು ಮಲೆನಾಡಿ ನಲ್ಲಿದ್ದ ಮತದಾನದ ಬಿರುಸು, ಬಯಲು ಸೀಮೆಯಲ್ಲಿ ಅದಕ್ಕೆ ತದ್ವಿರುದ್ಧವಾಗಿತ್ತು.

ನಗರ ಪ್ರದೇಶದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸುವ ಬದಲು ಮೋಜು ಮಾಡಲು ಮಾಲ್‍ಗಳ ಮೊರೆ ಹೋಗುತ್ತಿದ್ದರು. ಆದರೆ ಈ ಬಾರಿ ಆಯೋಗ ತೆಗೆದುಕೊಂಡ ನಿರ್ಧಾರದಿಂದ ಸಂಜೆಯವರೆಗೂ ಮಾಲ್‍ಗಳಿಗೆ ಬೀಗ ಜಡಿಯಲಾಗಿತ್ತು. ಆದರೂ ಬೀಗ ನೋಡಿಕೊಂಡೇ ಹೊರಗೆ ಕಾಲ ಕಳೆದರೆ ಹೊರತು ತಮ್ಮ ಹಕ್ಕು ಚಲಾಯಿಸುವ ಗೋಜಿಗೆ ಹೋಗಲಿಲ್ಲ. ಇದೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ಸ್ವಲ್ಪ ಮತದಾನದ ಪ್ರಮಾಣ ಏರಿಕೆ ಕಂಡಿದೆ. ಎಂದಿನಂತೆ ಕೆಲವು ಮತ ಕೇಂದ್ರಗಳಲ್ಲಿ ಮತಯಂತ್ರಗಳ ದೋಷ ಕಂಡುಬಂದಿತ್ತು. ಚಾಮರಾಜನಗರ ಜಿಲ್ಲೆಯ ಹನೂರು ಕಾಲೇಜು ಪ್ರಿನ್ಸಿಪಾಲ್ ಒಬ್ಬರು ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ವೇಳೆ ಕುಸಿದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಗರ್ಭೀಣಿ ಹೆಂಗಸು ಮತ ಚಲಾಯಿಸಿ ನಂತರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮತ ಮಾಡಲೇಬೇಕೆಂದು ದಕ್ಷಿಣ ಕನ್ನಡದಲ್ಲೊಬ್ಬರು ಐಸಿಯು ಚಿಕಿತ್ಸೆಯಿಂದ ಹೊರ ಬಂದು ತಮ್ಮ ಹಕ್ಕು ಚಲಾಯಿಸಿರುವ ಪ್ರಸಂಗವೂ ನಡೆದಿದೆ.