ಮೈಸೂರು, ಜು.18(ಎಂಕೆ)- ಅನ್ನಭಾಗ್ಯ ಯೋಜನೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆಎವೈ) ಅಡಿಯಲ್ಲಿ ಯಾವುದೇ ಗೊಂದಲವಿಲ್ಲದಂತೆ ಪ್ರತಿ ಪಡಿತರ ದಾರರಿಗೂ ಪಡಿತರ ವಿತರಣೆಯಾಗುತ್ತಿದ್ದು, ಆಗಸ್ಟ್‍ನಿಂದ ಕಡಲೆಕಾಳು ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು.
ಕಳೆದ ಮೇ, ಜೂನ್‍ನಲ್ಲಿ ಉಂಟಾಗಿದ್ದ ಗೊಂದಲಗಳು ಈಗ ನಿವಾರಣೆಯಾಗಿದ್ದು, ನಿರ್ಬಂಧಿತ ಪ್ರದೇಶಗಳಲ್ಲಿರುವ ಕೊರೊನಾ ಸೋಂಕಿತರ ಮನೆಗಳಿಗೂ ಮುನ್ನೆಚ್ಚರಿಕಾ ಕ್ರಮ ಗಳೊಂದಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ‘ಮೈಸೂರು ಮಿತ್ರ’ನಿಗೆ ಶನಿವಾರ ತಿಳಿಸಿದರು.
`ಅಂತ್ಯೋದಯ’ ಕಾರ್ಡ್‍ಗೆ 20 ಕೆ.ಜಿ. ಅಕ್ಕಿ, 15 ಕೆ.ಜಿ. ರಾಗಿ ಮತ್ತು ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ನೀಡಿದರೆ, ಆದ್ಯತಾ ಪಡಿತರ (ಪಿಹೆಚ್‍ಹೆಚ್-ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 3 ಕೆ.ಜಿ. ಅಕ್ಕಿ, 2 ಕೆ.ಜಿ ರಾಗಿ, ಪ್ರತಿ ಪಡಿತರ ಚೀಟಿಗೆ 2 ಕೆ.ಜಿ ಗೋಧಿ ಹಾಗೂ ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡ ಲಾಗುತ್ತಿದೆ. ಆದ್ಯತೇತರ ಪಡಿತರ(ಎನ್‍ಪಿಹೆಚ್‍ಹೆಚ್-ಎಪಿಎಲ್) ಕಾರ್ಡಿನವರಿಗೆ ಕೆ.ಜಿಗೆ 15 ರೂ.ನಂತೆ ಏಕವ್ಯಕ್ತಿ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ವಿತರಿಸ ಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಡಲೆಕಾಳು ವಿತರಣೆ: ವಲಸೆ ಕಾರ್ಮಿಕ ಅಥವಾ ಪಡಿತರ ಚೀಟಿ ಪಡೆಯದೆ ಇರುವ ಪ್ರತಿ ಫಲಾನುಭವಿಗೆ 5 ಕೆ.ಜಿ ಅಕ್ಕಿ ಜತೆಗೆ ಲಭ್ಯತೆಗೆ ಅನುಸಾರ ಜುಲೈನ 1 ಕೆ.ಜಿ ಕಡಲೆಕಾಳನ್ನು ಆಗಸ್ಟ್‍ನಲ್ಲಿ ವಿತರಿಸಲಾಗುತ್ತದೆ. ಆಗಸ್ಟ್‍ನಿಂದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೂ ಕಡಲೆಕಾಳು ನೀಡ ಲಾಗುವುದು ಎಂದು ವಿವರಿಸಿದರು.
ಪಡಿತರ ಚೀಟಿ ಪಡೆಯದ ಕುಟುಂಬಗಳಿಗೆ ಪ್ರತಿ ಸದಸ್ಯರಿಗೂ ಆಧಾರ್ ಕಾರ್ಡ್ ಮೂಲಕ ಜೂನ್‍ನಲ್ಲಿ ತಲಾ 10 ಕೆ.ಜಿ ಪಡಿತರ ವಿತರಣೆ ಮಾಡಲಾಗಿತ್ತು. ಜುಲೈನಲ್ಲಿ 5 ಕೆ.ಜಿಗೆ ಇಳಿಕೆ ಮಾಡಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯಾದ್ಯಂತ ಜುಲೈ ಪಡಿತರ ವಿತರಣೆಯಾಗು ತ್ತಿದೆ. ಜಿಲ್ಲೆಯ 22,22,590 ಪಡಿತರದಾರರಿಗೆ 47,614 ಕ್ವಿಂಟಾಲ್ ರಾಗಿ, 47,045 ಕ್ವಿಂಟಾಲ್ ಅಕ್ಕಿ, 13,149 ಕ್ವಿಂಟಾಲ್ ಗೋಧಿ ಹಾಗೂ ಪಿಎಂಜಿಕೆಎವೈ ಯೋಜನೆಯಡಿ ಅಂತ್ಯೋ ದಯ ಮತ್ತು ಬಿಪಿಲ್ ಕಾರ್ಡುದಾರರಿಗೆ 1,11,563 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಅಂಕಿ ಅಂಶ ನೀಡಿದರು.
ನಿರ್ಬಂಧಿತ ಪ್ರದೇಶ: ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗುರುತಿಸಿರುವ ನಿರ್ಬಂಧಿತ(ಸೀಲ್‍ಡೌನ್) ವಲಯ ಗಳಿಗೂ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ತಂಡ ರಚನೆಯಾ ಗಿದ್ದು, ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ಪಡಿತರ ತಲುಪಿ ಸುವ ವ್ಯವಸ್ಥೆಯಾಗುತ್ತಿದೆ. ಪಡಿತರಕ್ಕಾಗಿ ಕೊರೊನಾ ಸೋಂಕಿತರ ಮನೆಯಿಂದ ಹೊರಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು